ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಉಮ್ಮಚಗಿಯಲ್ಲಿ ಮನು ವಿಕಾಸ ಸಂಸ್ಥೆ ಕರ್ಜಗಿ ಹಾಗೂ
ಈಡೇಲ್ ಗೀವ್ ಫೌಂಡೇಶನ್ ಇವರ ವತಿಯಿಂದ ವಿ.ಎಸ್.ಎಸ್. ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಡುಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ, ಗ್ರಾಮೀಣ ಪ್ರದೇಶಗಳಲ್ಲಿ ಶುಚಿ ಮತ್ತು ರುಚಿಯಾದ ಆಹಾರ ತಯಾರಿಸಿ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಅಥವಾ ಕ್ಯಾಂಟೀನ್ ವ್ಯವಸ್ಥೆ ಆರಂಭಿಸುವ ಮೂಲಕ ಸ್ವ ಉದ್ಯೋಗಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಮ್ಮಚಗಿ ಗ್ರಾಮ ಪಂಚಾಯತ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಭಾಗವಹಿಸಿ, ಮಹಿಳೆಯರ ಸ್ವಾವಲಂಬನೆಗೆ ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದು ಹೇಳಿದರು. ಮತ್ತೊಬ್ಬ ಅತಿಥಿ ತಾಲೂಕು ಪಂಚಾಯತ ಮಾಜಿ ಸದಸ್ಯೆ ರಾಧಾ ಹೆಗಡೆ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಉದ್ದೇಶಿಸಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು.
ಸಂಸ್ಥೆಯ ಯೋಜನಾ ನಿರ್ದೇಶಕ ಎಂ.ಜಿ. ಹೆಗಡೆ, ನಯನಾ ಹೆಗಡೆ ಉಮ್ಮಚಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಶಿಲ್ಪಾ ಸೇರಿದಂತೆ ಇತರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮನು ವಿಕಾಸ ಸಂಸ್ಥೆಯ ಮುಖ್ಯಸ್ಥರಾದ ಗಣಪತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭವಾನಿ ನಾಯ್ಕ ನಿರೂಪಣೆ ನಡೆಸಿದರು. ಸಿ.ಆರ್.ಪಿ. ಗಾಯತ್ರಿ ನಾಯ್ಕ ವಂದಿಸಿದರು. ಅಡುಗೆ ತರಬೇತುದಾರರಾಗಿ ನಯನಾ ಹೆಗಡೆ ಮತ್ತು ಮಂಜುನಾಥ ಪೂಜಾರಿ ಭಾಗವಹಿಸಿದ್ದರು.
