ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಜೋಯಿಡಾ,ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ ಅಣಶಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಾಗೂ ಮಹಿಳಾ ವಿಶೇಷ ಗ್ರಾಮಸಭೆ ಮತ್ತು ಸಾಮಾನ್ಯ ಸಭೆ ಗುರುವಾರ ನಡೆಯಿತು.
ಮಕ್ಕಳ ಹಾಗೂ ಮಹಿಳಾ ವಿಶೇಷ ಗ್ರಾಮ ಸಭೆಯ ಆರಂಭದಲ್ಲಿ ಅಣಶಿ ಗ್ರಾಮ ಪಂಚಾಯತ ಗ್ರಂಥಪಾಲಕರಾದ ರಮೇಶ ಸಾವಂತ ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು.ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು . ಅಣಶಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮೋಹನ ಡೊಂಬರ ಮಕ್ಕಳ ಹಾಗೂ ಮಹಿಳಾ ವಿಶೇಷ ಗ್ರಾಮ ಸಭೆಯ ಕುರಿತು ಪ್ರಾಸ್ತಾವಿಕ ಮಾತನಾಡಿ ಮಕ್ಕಳ ಗ್ರಾಮಸಭೆಯ ಉದ್ದೇಶ, ಹಕ್ಕು,ಕರ್ತವ್ಯಗಳ ಬಗ್ಗೆ,ಬಾಲ್ಯ ವಿವಾಹ, ಬಾಲಕಾರ್ಮಿಕರ, ಶಾಲೆಯಿಂದ ಹೊರಗುಳಿದ ಮಕ್ಕಳ ಹಾಗೂ ಮಹಿಳೆಯರ ಹಕ್ಕು ಕರ್ತವ್ಯಗಳು,ಲಿಂಗತ್ವ ಸಮಾನತೆ,ಮಹಿಳಾ ದೌರ್ಜನ್ಯದಿಂದ ರಕ್ಷಣೆ, ಮಹಿಳೆಯರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸ್ವಸಹಾಯ ಸಂಘಗಳ ಸಂಬಂಧಿಸಿದ,ಆರೋಗ್ಯ ಹಾಗೂ ಸ್ವಚ್ಛತೆಯ ವಿಷಯದ ಬಗ್ಗೆ ಮಾತನಾಡಿದರು.
ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಲಕ್ಷ್ಮಣ ಬರ್ಸೇಕರ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಬೇಡಿಕೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಭೀತಿಯಿಂದ ಮುಕ್ತವಾಗಿ,ಜೊತೆಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು,ಶಿಕ್ಷಕರು ಭಾಗವಹಿಸಿ ತಮ್ಮ ತಮ್ಮ ಶಾಲೆಗಳಿಗೆ ಅವಶ್ಯಕತೆ ಇರುವ ಬೇಡಿಕೆಗಳನ್ನು ಹಾಗೂ ಮಹಿಳೆಯರು ಮೂಲಭೂತ ಸೌಕರ್ಯಗಳ ಬಗ್ಗೆ ಸಹ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು. ಮುಖ್ಯವಾಗಿ ಶಾಲೆಗಳ ಕುಡಿಯುವ ನೀರು, ಶೌಚಾಲಯ,ಸ್ವಚ್ಛತೆ,ಆಟದ ಮೈದಾನ,ಕೊಠಡಿ,ಕಂಪೌಂಡ, ವಿದ್ಯುತ್ ವ್ಯವಸ್ಥೆ,ಮಹಿಳೆಯರ ಮೂಲಭೂತ ಸೌಕರ್ಯ,ಯೋಜನೆಗಳ ಸಂಬಂಧಿಸಿದ ವಿಷಯಗಳು ಚರ್ಚೆಯಾದವು. ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಹಿಂದಿನ ವರ್ಷದ ಗ್ರಾಮ ಸಭೆಯ ಬೇಡಿಕೆ,ಪೂರ್ಣಗೊಂಡ ಕಾಮಗಾರಿಯ, ಮಂಜೂರಾದ ಕಾಮಗಾರಿಯ ಮಾಹಿತಿ ನೀಡಿ,ಮುಂದಿನ ಆರ್ಥಿಕ ವರ್ಷದ ಬೇಡಿಕೆಯ ಮಾಹಿತಿಯನ್ನು ಪಡೆದುಕೊಂಡರು.
ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ವೇಳಿಪ ಮಾತನಾಡಿ ಮಕ್ಕಳ ಗ್ರಾಮ ಸಭೆಯ ಉದ್ದೇಶ ಮಕ್ಕಳಲ್ಲಿ ಬಾಲ್ಯದಿಂದಲೇ ಅವರ ಹಕ್ಕುಗಳು,ಕರ್ತವ್ಯಗಳ ಬಗ್ಗೆ ಹಾಗೂ ಮಹಿಳೆಯರ ಹಕ್ಕು,ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಗ್ರಾಮಸಭೆಯನ್ನು ಆಯೋಜಿಸಿದೆ ಎಂದು ಹೇಳಿದರು. ಸಭೆಯಲ್ಲಿ ಅಣಶಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪುಷ್ಪಾ ವೇಳಿಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸರಕಾರಿ ಪ್ರೌಢಶಾಲೆ ಅಣಶಿಯ ವಿದ್ಯಾರ್ಥಿ ಪ್ರತಿನಿಧಿ,ಗ್ರಾಮ ಪಂಚಾಯತ ಸದಸ್ಯರು,ಡಾಟಾ ಎಂಟ್ರಿ ಅಪರೇಟರ್ ನೀತಾ ಪಾಟ್ನೇಕರ, ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಎನ್ ಆರ್ ಎಲ್ ಎಮ್ ಸಿಬ್ಬಂದಿ, ಸ್ವಸಹಾಯ ಸಂಘಗಳ ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು,ಆಶಾ ಕಾರ್ಯಕರ್ತೆಯರು, ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಕಾರ್ಯಕ್ರಮವನ್ನು ಅಣಶಿ ಗ್ರಾಮ ಪಂಚಾಯತ ಗ್ರಂಥಪಾಲಕರಾದ ರಮೇಶ ಸಾವಂತ ಅತ್ಯುತ್ತಮವಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.
