ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಜೋಯಿಡಾ,ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ ಪ್ರಧಾನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಗ್ರಾಮ ಸಭೆಯು ಬುಧವಾರ ನಡೆಯಿತು.

ಮಕ್ಕಳ ಗ್ರಾಮ ಸಭೆಯ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು.ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು . ಪ್ರಧಾನಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಉಮ್ಮಣ್ಣವರ್ ಮಕ್ಕಳ ಗ್ರಾಮ ಸಭೆಯ ಕುರಿತು ಪ್ರಾಸ್ತಾವಿಕ ಮಾತನಾಡಿ ಮಕ್ಕಳ ಗ್ರಾಮಸಭೆಯ ಉದ್ದೇಶ, ಹಕ್ಕು,ಕರ್ತವ್ಯಗಳ ಬಗ್ಗೆ,ಬಾಲ್ಯ ವಿವಾಹ, ಬಾಲಕಾರ್ಮಿಕರ, ಶಾಲೆಯಿಂದ ಹೊರಗುಳಿದ ಮಕ್ಕಳ ವಿಷಯದ ಬಗ್ಗೆ ಮಾತನಾಡಿದರು.

ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಬೇಡಿಕೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಭೀತಿಯಿಂದ ಮುಕ್ತವಾಗಿ ಚರ್ಚಿಸುವಂತೆ ಸೂಚಿಸಿದರು. ಸಭೆಯಲ್ಲಿ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು,ಶಿಕ್ಷಕರು ಭಾಗವಹಿಸಿ ತಮ್ಮ ತಮ್ಮ ಶಾಲೆಗಳಿಗೆ ಅವಶ್ಯಕತೆ ಇರುವ ಬೇಡಿಕೆಗಳನ್ನು ಸಲ್ಲಿಸಿದರು.

ಮುಖ್ಯವಾಗಿ ಶಾಲೆಗಳ ಕುಡಿಯುವ ನೀರು,ಶೌಚಾಲಯ,ಸ್ವಚ್ಛತೆ,ಆಟದ ಮೈದಾನ,ಕೊಠಡಿ,ಕಂಪೌಂಡ, ವಿದ್ಯುತ್ ವ್ಯವಸ್ಥೆ ಈ ಎಲ್ಲಾ ವಿಷಯಗಳು ಚರ್ಚೆಯಾದವು. ಗ್ರಾಮ ಪಂಚಾಯತ ಕಾರ್ಯದರ್ಶಿಗಳು ಹಿಂದಿನ ವರ್ಷದ ಗ್ರಾಮ ಸಭೆಯ ಬೇಡಿಕೆ,ಮಂಜೂರಾದ ಕಾಮಗಾರಿಯ ಮಾಹಿತಿ ನೀಡಿ,ಮುಂದಿನ ಆರ್ಥಿಕ ವರ್ಷದ ಬೇಡಿಕೆಯ ಮಾಹಿತಿಯನ್ನು ಪಡೆದುಕೊಂಡರು. ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ಮಾತನಾಡಿ ಮಕ್ಕಳ ಗ್ರಾಮ ಸಭೆಯ ಉದ್ದೇಶ ಮಕ್ಕಳಲ್ಲಿ ಬಾಲ್ಯದಿಂದಲೇ ಅವರ ಹಕ್ಕುಗಳು,ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಗ್ರಾಮಸಭೆಯನ್ನು ಆಯೋಜಿಸಿದೆ.ಮಕ್ಕಳು ಉತ್ತಮ ಶಿಕ್ಷಣದ ಜೊತೆ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಲಾಭದ ಜೊತೆ ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆಯುವ ಮೂಲಕ,ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಸಾಧನೆಯನ್ನು ತನ್ಮೂಲಕ ಊರಿಗೆ, ತಾಲೂಕು, ಜಿಲ್ಲೆಯ,ರಾಜ್ಯ,ದೇಶದ,ಪಾಲಕರ,ಪೋಷಕರ,ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳಿದರು. ಸಭೆಯಲ್ಲಿ ಪ್ರಧಾನಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾರಾಮ ಮಾಯರೆಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸರಕಾರಿ ಪ್ರೌಢಶಾಲೆ ಬೈಲಪಾರನ ಮುಖ್ಯ ಶಿಕ್ಷಕರಾದ ವಿನಾಯಕ ಪೈ,ಬಾಮಣಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಭಾಷ ಗಾಂವ್ಕರ,ಮನಾಯಿ ಶಾಲೆಯ ಪುಂಡಲೀಕ ಲಮಾಣಿ ಇನ್ನುಳಿದ ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಉಪಸ್ಥಿತರಿದ್ದರು.

ಬಾಮಣಗಿ ಶಾಲೆಯ ಸಹ ಶಿಕ್ಷಕರಾದ ಬಿ.ಚವ್ಹಾಣ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ, ಪಿಲೋಮೀನ ನರೋನ,ಸುಮನಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಸಹ ಶಿಕ್ಷಕಿಯಾದ ಸುಮನಾರವರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.