ಸುದ್ದಿ ಕನ್ನಡ ವಾರ್ತೆ
. ಹಳಿಯಾಳ: ಹೆಸ್ಕಾಂ ಇಲಾಖೆಯ ಬೇಜವಾಬ್ದಾರಿತನಕ್ಕೆ ಬಡ ರೈತರು ಬೆಳೆದಿದ್ದ ಸುಮಾರು 15 ಎಕರೆಗೂ ಅಧಿಕ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಪಟ್ಟಣದ ಅಂಚಿನಲ್ಲಿರುವ ಹಳಿಯಾಳ-ಯಡೋಗಾ ರಸ್ತೆ ಪಕ್ಕದಲ್ಲಿ ಸಂಭವಿಸಿದೆ.
ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರಿಂದ ಉಂಟಾದ ಕಿಡಿಯಿಂದಾಗಿ ಈ ಅವಘಡ ಸಂಭವಿಸಿದ್ದು, ಸುಮಾರು 6 ರೈತರಿಗೆ ಸೇರಿದ 350 ಟನ್‌ಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಬೂದಿಯಾಗಿದ್ದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ.
ಈ ಭಾಗದಲ್ಲಿ ವಿದ್ಯುತ್ ತಂತಿಗಳು ಕೆಳಕ್ಕೆ ಜೋತು ಬಿದ್ದಿದ್ದು, ಇದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ರೈತರು ಈ ಹಿಂದೆಯೇ ಹೆಸ್ಕಾಂ ಇಲಾಖೆಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ಇಂತಹ ದೊಡ್ಡ ಅನಾಹುತ ಸಂಭವಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಮಾವಳು ಹನುಮಂತ ಜಾವಳೆಕರ (3 ಎಕರೆ), ಸಹದೇವ ಬೋಬಾಟಿ (2 ಎಕರೆ), ತಾನಾಜಿ ಮರಾಠ (3 ಎಕರೆ), ನಾರಾಯಣ ಅರೆಬೇಡರ (2 ಎಕರೆ), ಗುರುನಾಥ ಡಮ್ಮನಗಿಮಠ (4 ಎಕರೆ) ಮತ್ತು ಮಹೇಶ ತೋರ್ಲೆಕರ ಅವರ 1 ಎಕರೆ ಕಬ್ಬು ನಾಶವಾಗಿದೆ.
ಒಟ್ಟಾರೆಯಾಗಿ ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ಬಡ ರೈತರ ಬದುಕು ಬೀದಿಗೆ ಬಂದಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.
