ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಪಂಚಾಯತದ ಕಾಡಿನೊಳಗಿನ ದುರ್ಗಮ ಹಾದಿಯ ಸಣ್ಣ ಊರು ನೆಲಪಾಲ. ಎಲ್ಲ ಹಳ್ಳಿಗಳಂತೆ ಇಲ್ಲಿನ ಯುವಕರು ಉದ್ಯೋಗ ನಿಮಿತ್ತ ಬೆಂಗಳೂರು,ಮುಂಬೈ, ದೂರದ ಅಮೆರಿಕ ಹೀಗೆ ಬೇರೆಬೇರೆ ಕಡೆ ಹೋಗಿಯೂ ನೆಲೆಸಿದ್ದರೆ.ಆದರೆ ಇವರೆಲ್ಲ ವರ್ಷಕ್ಕೊಮ್ಮೆ ಹುಟ್ಟೂರಿಗೆ ಬಂದೇ ಬರುತ್ತಾರೆ.

ಊರಲ್ಲಿರುವ ಯುವಕರು,ಹಿರಿಯರು,ಮಕ್ಕಳು,ಮಾತೆಯರೊಂದಿಗೆ ಬೆರೆತು ಒಂದು ಬೆಳದಿಂಗಳ ಊಟದ ಕಾರ್ಯಕ್ರಮ ನಡೆಸುತ್ತಾರೆ. ಇವರೊಂದಿಗೆ ಸುತ್ತಮುತ್ತಲಿನ ಊರುಗಳ ಹಿರಿಕಿರಿಯರೆಲ್ಲ ಬಂದು ಬೆರೆಯುತ್ತಾರೆ. ಪ್ರತಿ ವರ್ಷವೂ ಈ ಕಾರ್ಯಕ್ರಮಕ್ಕೆ ಒಂದೊಂದು ಥೀಮ್ ಹೆಣೆಯುತ್ತಾರೆ.
ಹಾಗೆಯೇ ಈ ವರ್ಷವೂ ಕೂಡ ಆಯಿತು. ಎರಡು ಮೂರು ಮನೆಗಳಿರುವ ಕಾಡಿನೊಳಗಿನ ಮನೆಯ ಅಂಗಳದಲ್ಲಿ,ಅಡಕೆಗೊನೆ ರಾಶಿಯ ಬದಿಯಲ್ಲಿ ಈ ಬಾರಿ ನೂರೈವತ್ತಕ್ಕೂ ಹೆಚ್ಚು ಪ್ರಬುದ್ಧ ನಾಗರಿಕರ ಸಮಾಗಮ ಆಗಿತ್ತು. ಹೊಸವರ್ಷದ ಚಿಂತನೆ,ಆರೆಸ್ಸೆಸ್ ಶತಾಬ್ದಿಯ ಅವಲೋಕನ ನಂತರ ಬೆಳದಿಂಗಳಲ್ಲಿ ಒಂದೊಳ್ಳೆ ಊಟ…
ಹೊಸ ಕ್ಯಾಲೆಂಡರ್ ವರ್ಷದ ಸ್ವಾಗತಕ್ಕೆ ಇದಕ್ಕಿಂತ ಉತ್ತಮ ಸ್ವಾಗತ ಬೇರೇನು ಸಿಕ್ಕೇತು ಅಲ್ಲವೇ.
ಹಿರಿಯ ಪತ್ರಕರ್ತರಾದ ಹರಿಪ್ರಕಾಶ ಕೋಣೆಮನೆ , ಯು ವಕರಾದ ಅಕ್ಷಯ ಗಾಂವ್ಕರ,ಗಿರೀಶ್ ಗಾಂವ್ಕರ,ಪ್ರಸನ್ನ ಗಾಂವ್ಕರ, ಆರೆಸ್ಸೆಸ್ ಕಾರ್ಯಕರ್ತ ದೀಪಕ ಭಟ್ ಶೀಗೆಕೇರಿ ಮತ್ತು ಊರಿನ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
