ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ ಶಾಲೆಯ ಶೈಕ್ಷಣಿಕ ಪ್ರವಾಸ ಜಿಲ್ಲಾ ಪಂಚಾಯತ ಉತ್ತರಕನ್ನಡ,ಸಾರ್ವಜನಿಕ ಶಿಕ್ಷಣ ಇಲಾಖೆ ಜೋಯಿಡಾ,ಶಾಲಾ ಆಡಳಿತ ಮಂಡಳಿಯವರ, ಪಾಲಕರ,ಪೋಷಕರ,ಶಿಕ್ಷಕರ ಇವರ ಸಹಯೋಗದೊಂದಿಗೆ ಭಾನುವಾರ ಯಶಸ್ವಿಯಾಯಿತು.
ಪ್ರವಾಸ ಎಂದರೆ ಯಾರಿಗೆ ಇಷ್ಟವಿಲ್ಲ, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಖುಷಿಯೋ ಖುಷಿ,ಪ್ರವಾಸದ ವೇಳೆ ಸಿಗುವ ಆನಂದ, ರೋಮಾಂಚಕ ಅನುಭವ ಸ್ವತಃ ಪ್ರವಾಸದಲ್ಲೇ ಭಾಗಿಯಾದವರೇ ವರ್ಣಿಸಲು ಸಾಧ್ಯ. ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ದಿನಾಂಕ ನಿಗದಿ ಪಡಿಸಿದ ನಂತರ ಮಕ್ಕಳಿಗಂತೂ ಪ್ರವಾಸಕ್ಕೆ ಹೋಗುವ ಜಾಗದ ಸ್ಥಳದ ಮಾಹಿತಿ,ವಾಹನದ ವ್ಯವಸ್ಥೆ,ಹೋಗುವ ಸಮಯ, ತಯಾರಿ,ಈ ಎಲ್ಲಾ ವಿಷಯಗಳ ಬಗ್ಗೆ ತಮ್ಮ ಶಿಕ್ಷಕರೊಂದಿಗೆ ಚರ್ಚೆ,ಬೆಳಿಗ್ಗೆ ಬೇಗನೆ ಎದ್ದು ತಮಗಿಷ್ಟವಾದ ತಿಂಡಿತಿನಿಸಿನ ಪೊಟ್ಟಣವನ್ನು ತಯಾರಿ ಮಾಡಿಕೊಂಡು ಒಂದು ದಿನದ ಪ್ರಯಾಣಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡು ವಾಹನ ಚಾಲಕ ವಾಹನ ಆರಂಭ ಮಾಡಿ ತಾವು ನೋಡಬೇಕಿರುವ ಪ್ರವಾಸ ಸ್ಥಳಕ್ಕೆ ಮುಟ್ಟುವುವವರೆಗೂ ಸಮಾಧಾನ ಇರುವುದಿಲ್ಲ. ರಾಮನಗರದ ಹನುಮಾನಲೇನ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ಪಠ್ಯೇತರ ಚಟುವಟಿಕೆಯ ಭಾಗವಾಗಿ ಭಾನುವಾರ ಶಾಲಾ ಶೈಕ್ಷಣಿಕ ಪ್ರವಾಸದ ನಿಮಿತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಸಾರಿಗೆ ಸಂಸ್ಥೆಯ ಇಲಾಖೆಯ ನಿಯಮ,ಮಾರ್ಗಸೂಚಿ ಅನ್ವಯಗಳನ್ನು ಪಾಲಿಸಿ PRS WATER PARK ಶಿಗ್ಗಾಂವಿ, ಜೈನಮಂದಿರ, ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದರು.
ಬೆಳಿಗ್ಗೆ ಸಾರಿಗೆ ಸಂಸ್ಥೆಯ ಬಸ್ಸಿನ ಆಸನದಲ್ಲಿ ಕುಳಿತು ಹಾಡು ಹೇಳುವುದು,ಅಂತ್ಯಾಕ್ಷರಿ,ಮಿಮಿಕ್ರಿ ಹೀಗೆ ತಮಗಿಷ್ಟವಾದ ರೀತಿಯಲ್ಲಿ ಪ್ರವಾಸದ ಮೊದಲ ಸ್ಥಳವಾದ PRS WATER PARK ಶಿಗ್ಗಾಂವಿಗೆ ಭೇಟಿ ನೀಡಿ ಅಲ್ಲಿಯ ವಾಟರ್ ಪಾರ್ಕ್ ನ ಎಲ್ಲಾ ಚಟುವಟಿಕೆಗಳನ್ನು ನೋಡಿ,ಅದರಲ್ಲಿ ಶಿಕ್ಷಕರ, ಮಾರ್ಗದರ್ಶಕರ ಸಹಕಾರದಲ್ಲಿ ತೊಡಗಿಕೊಂಡು ಸಂತಸವನ್ನು ಅನುಭವಿಸಿದರು.ಜೊತೆಯಲ್ಲಿ ತಾವು ಮನೆಯಿಂದ ತಂದ ತಿಂಡಿತಿನಿಸಿನ ಪೊಟ್ಟಣದ ತಿಂಡಿಗಳನ್ನು ಪರಸ್ಪರ ಶಿಕ್ಷಕ ವೃಂದದವರೊಂದಿಗೆ ಹಂಚಿ ತಿಂದರು.ಅಲ್ಲಿನ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ನಂತರ ಮಕ್ಕಳು,ಶಿಕ್ಷಕರು ಜೈನ ಮಂದಿರಕ್ಕೆ ಭೇಟಿ ನೀಡಿ ಮಂದಿರ ಪರಿಸರದಲ್ಲಿನ ಎಲ್ಲಾ ಸ್ಥಳಗಳನ್ನು ವೀಕ್ಷಿಸಿದರು.ಎಲ್ಲಾ ಸ್ಥಳಗಳ ಬಗ್ಗೆ ಮಂದಿರದಲ್ಲಿನ ಮಾರ್ಗದರ್ಶಕರು ಮಾಹಿತಿ ಪಡೆದರು.ಶಿಕ್ಷಕರು ಸಹಕಾರ ನೀಡಿದರು.
ನಂತರ ಹುಬ್ಬಳ್ಳಿಯಲ್ಲಿರುವ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಮಠದ ಪರಿಸರದಲ್ಲಿನ ಎಲ್ಲಾ ಸ್ಥಳಗಳನ್ನು ಶಿಕ್ಷಕರ ಸಹಕಾರದಲ್ಲಿ ವೀಕ್ಷಿಸಿದರು. ಪ್ರವಾಸದ ಸಂದರ್ಭದ ಸಮಯದಲ್ಲಿ ಹನುಮಾನಲೇನ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು,ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಹೆಚ್ ಭಾಗವನರವರು,ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ, ನಾಗರತ್ನಾ ಮೋಗೇರ,ಸಂಜನಾ ಮಿರಾಶಿ ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಪ್ರವಾಸದ ಉದ್ದೇಶ, ಅವಶ್ಯಕತೆ, ಪಠ್ಯದಲ್ಲಿ ಸ್ಥಳಗಳ ಬಗ್ಗೆ ನಾವು ಓದಿ ತಿಳಿಯುತ್ತೇವೆ, ಪ್ರವಾಸದಲ್ಲಿ ಪ್ರತ್ಯಕ್ಷ ನೋಡಿ,ಅದರಲ್ಲಿ ಭಾಗಿಯಾಗಿ ಅನುಭವವನ್ನು ಪಡೆಯುತ್ತೇವೆ, ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮಹತ್ವದ ಕುರಿತು ತಿಳಿಸಿದರು.
ಮಕ್ಕಳು ಉತ್ಸಾಹದಿಂದ ಪ್ರವಾಸದ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಸಂತಸವನ್ನು ಅನುಭವಿಸಿದರು. ಒಟ್ಟಿನಲ್ಲಿ ರಾಮನಗರದ ಹನುಮಾನಲೇನ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ತಮ್ಮ ಒಂದು ದಿನದ ಶಾಲಾ ಶೈಕ್ಷಣಿಕ ಪ್ರವಾಸವನ್ನು ಎಲ್ಲರ ಸಹಕಾರದಿಂದ ಯಶಸ್ವಿಗೊಳಿಸಿದರು.
