ಸುದ್ದಿ ಕನ್ನಡ ವಾರ್ತೆ
ಶಿರಸಿ: ಪದವಿ ಪಡೆದವರಿಗೆ, ಪಡೆಯುವವರಿಗೆ ಕೃಷಿ ಕುಟುಂಬದಿಂದ ಬಂದರೂ ಕೃಷಿಯಲ್ಲಿ ಆಸಕ್ತಿ ವಿರಳ. ಆದರೆ, ಪದವಿ ವಿದ್ಯಾರ್ಥಿಗಳಿಗೆ ಕೃಷಿಯ ಬದುಕು ಕುರಿತು, ಅದರಲ್ಲಿನ ನೆಮ್ಮದಿ ಕುರಿತು ಶಿರಸಿ ಶಾಸಕ ಭೀಮಣ್ಣ ನಾಯ್ಕ ಪಾಠ ಮಾಡಿದ ಅಪರೂಪದ ಘಟನೆ ಮಳಲಗಾಂವದಲ್ಲಿ ನಡೆದಿದೆ. ದಿನನಿತ್ಯ ಕ್ಷೇತ್ರದಾದ್ಯಂತ ಓಡಾಟ ಮಾಡಿ ಜನರ ಸಮಸ್ಯೆ ಆಲಿಸುತ್ತಿದ್ದ ಶಾಸಕ ಭೀಮಣ್ಣ ನಾಯ್ಕ ತಮ್ಮ ಊರಾದ ತಾಲೂಕಿನ ಮಳಲಗಾಂವ ತೋಟದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಮಾಡಿ ಗಮನಸೆಳೆದರು.
ಶಿರಸಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಿಂದ ಎನ್‌ಎಸ್‌ಎಸ್ ಶಿಬಿರವನ್ನು ಇದೇ ಊರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪಾಠದ ಜತೆ ಕೃಷಿಯಲ್ಲಿ ಆಸಕ್ತಿ ವಹಿಸಬೇಕಲ್ಲದೇ ಅವರಿಗೂ ಕೃಷಿಯ ಕುರಿತು ಮಾಹಿತಿ ಇರಬೇಕೆಂದು ತೋಟ ವೀಕ್ಷಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳಿಗೆ
ಕಾಳು ಮೆಣಸಿನ ಬಳ್ಳಿ, ಅಡಿಕೆ, ಬಾಳೆ ಕೃಷಿಯ ಕುರಿತು ವಿವರವಾಗಿ ಮಾತನಾಡಿದರು. ಫಣಿಯೂರು ಮತ್ತು ಮಲ್ಲಿಸರ ಕಾಳು ಮೆಣಸು ನಮ್ಮ ಹವಾಮಾನಕ್ಕೆ ಒಗ್ಗುತ್ತವೆ. ಚಾಲಿ ಅಡಕೆಯನ್ನು ಸುಲಿಯುವಾಗ ಈ ರೀತಿ ಕುಳಿತುಕೊಳ್ಳಬೇಕು. ಅಡಿಕೆ ಬೇಸಾಯ ಹೀಗೆ ಎನ್ನುತ್ತ, ಗೊಬ್ಬರ, ಪೋಷಕಾಂಶಗಳ, ರೋಗಗಳ, ಔಷಧಗಳ ವಿವರ ಸಹಿತ ಕೃಷಿಯ ಒಂದೊಂದೇ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿದರು.
ಇಷ್ಟಕ್ಕೂ ಶಾಸಕ ಭೀಮಣ್ಣ ನಾಯ್ಕ ಮೂಲತಃ ಕೃಷಿಯ ಹಿನ್ನೆಲೆ ಹೊಂದಿದವರು. ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಸ್ವತಃ ಕಾರ್ಯ ನಡೆಸುವ ಮೂಲಕ ಬೆಳೆದು ಬಂದವರು. ಬಿಡುವಿನ ವೇಳೆಯಲ್ಲಿ ತಮ್ಮ ಮೂಲ ಮನೆಗೆ ತೆರಳಿ ಈಗಲೂ ಅವರು ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ.ಜಿ.ಟಿ. ಭಟ್ಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಾಧ್ಯಕ್ಷ ಎಸ್.ಎಂ. ಕಮನಳ್ಳಿ, ಸದಸ್ಯರಾದ ಡಾ.ಕೆ.ಕೆಂಪರಾಜು, ಜಾಫಿ ಪೀಠರ್, ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರು, ಗಣೇಶ ದಾವಣಗೆರೆ ಮತ್ತಿತರರು ಇದ್ದರು.