ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಜಿಲ್ಲಾ ಪಂಚಾಯತ ಉತ್ತರಕನ್ನಡ, ಸರಕಾರಿ ಪ್ರೌಢಶಾಲೆ ಗುಂದದ ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.

ಕ್ರೀಡಾಕೂಟದ ವೇದಿಕೆಯ ಕಾರ್ಯಕ್ರಮದ ಗಣ್ಯರನ್ನು ಪ್ರೌಢಶಾಲೆಯ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ ಅವರು ವಿದ್ಯಾರ್ಥಿಗಳಿಂದ ಪುಷ್ಪವನ್ನು ನೀಡುವ ಮೂಲಕ ಸ್ವಾಗತಿಸಿದರು.ನಂತರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆಯನ್ನು ಹಾಡಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಬಿ ಗೊನ್ಸಾಲಿಸ್ ರವರು ಶಾಲೆಯ ವಾರ್ಷಿಕ ಯೋಜನೆಯ ಪ್ರಕಾರ ಕ್ರೀಡಾಕೂಟವನ್ನು ಆಯೋಜಿಸುವುದು,ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಶಿಕ್ಷಣದ ಭಾಗವಾಗಿದೆ.ವಿದ್ಯಾರ್ಥಿಗಳು ಕ್ರೀಡೆಯಿಂದ ದೈಹಿಕ ಆರೋಗ್ಯ ಮಾನಸಿಕ ಒತ್ತಡ ನಿವಾರಣೆ,ಶಿಸ್ತು,ಸಮಯ ಪಾಲನೆ,ನಾಯಕತ್ವ ಗುಣಗಳನ್ನು ಪಡೆಯಬಹುದು.ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವನೆಯಿಂದ ಆಟವಾಡಿ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿ,ಉತ್ತಮ ಕ್ರೀಡಾಕೂಟದ ಆಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ದಾನಗೇರಿ ಮಾತನಾಡಿ ತಮ್ಮ ಬಾಲ್ಯದ ದಿನಗಳ ಶಿಕ್ಷಣವನ್ನು ನೆನಪು ಮಾಡಿಕೊಂಡು,ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿನ ಸಹಕಾರದ ಕುರಿತು,ಕ್ರೀಡಾಕೂಟ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮುಖ್ಯ,ನಮ್ಮ ಗುಂದ ಪ್ರೌಢಶಾಲೆಯು ಉತ್ತಮ ಶಿಕ್ಷಕರ ವೃಂದ ಹೊಂದಿರುವ ಕಾರಣ ಶಿಕ್ಷಣ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ.ವಿದ್ಯಾರ್ಥಿಗಳು ಸಹ ಇನ್ನೂ ಉತ್ತಮ ಸಾಧನೆಯನ್ನು ಮಾಡಿ ಊರಿನ,ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ,ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮಹತ್ವದ್ದು, ಶಿಕ್ಷಣದ ಅಭಿವೃದ್ಧಿಗೆ ಸೇವಾ ಸಹಕಾರಿ ಸಂಘದ ಹಾಗೂ ವೈಯುಕ್ತಿಕ ಸಹಕಾರ ನಿರಂತರ ಇರಲಿದೆ ಎಂದು ಕ್ರೀಡಾಕೂಟಕ್ಕೆ ತನು ಮನ ಧನದ ಸಹಕಾರ ನೀಡಿದರು. ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಕ್ರೀಡೆಯಿಂದ ದೈಹಿಕ ಆರೋಗ್ಯ ಸುಧಾರಣೆ,ಮಾನಸಿಕ ಒತ್ತಡ ನಿವಾರಣೆ,ಶಿಸ್ತು ಮತ್ತು ಸಮಯ ನಿರ್ವಣೆಯ ಜೀವನದ ಕೌಶಲದ ಅಭಿವೃದ್ಧಿಗೆ,ತಂಡದ ಕೆಲಸ, ನಾಯಕತ್ವದಂತಹ ಸಾಮಾಜಿಕ ಗುಣಗಳನ್ನು ಬೆಳಸುವ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ.ಕ್ರೀಡೆಗಳು ನಮ್ಮನ್ನು ಉತ್ತಮ ಆರೋಗ್ಯವಂತರನ್ನಾಗಿ, ಶಕ್ತಿಶಾಲಿಯನ್ನಾಗಿ ಹಾಗೂ ಆತ್ಮವಿಶ್ವಾಸದಿಂದ ಇರಲು ಸಹಾಯ ಮಾಡುತ್ತದೆ. ಕ್ರೀಡೆಗಳು ಕೇವಲ ವ್ಯಾಯಾಮವಲ್ಲ,ಬದಲಿಗೆ ಒಬ್ಬ ವ್ಯಕ್ತಿಯನ್ನು ಉತ್ತಮ ಆರೋಗ್ಯವಂತ, ಸಮಾಜದಲ್ಲಿ ಯಶಸ್ವಿ ನಾಗರಿಕರನ್ನಾಗಿ ರೂಪಿಸುವ ಸಮಗ್ರ ಮಾರ್ಗವಾಗಿದೆ. ನಮ್ಮ ಗುಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನ ಹಾಗೂ ಮುಖ್ಯ,ಸಹ ಶಿಕ್ಷಕರ ಸಹಕಾರದಲ್ಲಿ ವಲಯ, ತಾಲೂಕು, ಜಿಲ್ಲಾ,ರಾಜ್ಯ ಮಟ್ಟದಲ್ಲಿಯೂ ಮಿಂಚಿದ್ದು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಿ,ತನ್ಮೂಲಕ ಊರಿನ, ಶಿಕ್ಷಕರ,ಪಾಲಕರ ಕೀರ್ತಿಯನ್ನು ಹೆಚ್ಚಿಸಿ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ, ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಿ,ನಾವು ಜೀವನದಲ್ಲಿ ಸಾಧನೆಯನ್ನು ಮಾಡಲು ಗುರಿ ಹಾಗೂ ಉತ್ತಮ ಗುರು ಹೊಂದುವುದು ಅನಿವಾರ್ಯ ಎಂದು ಹೇಳಿ ಕ್ರೀಡಾಕೂಟ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ವೇದಿಕೆಯ ಮೇಲಿದ್ದ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಹಾದೇವ ವೇಳಿಪ,ಪಾಲಕರಾದ ರವೀಂದ್ರ ಸಾವರಕರ,ನಂದಿಗದ್ದೆ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎಲ್ವಿಸ್ ಕುಲಾಸ್,ಸುವರ್ಣಾ ದೇಸಾಯಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರೌಢಶಾಲೆಯ ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ, ಪುರುಷೋತ್ತಮ ಜಿ,ಬಸವರಾಜ,ರಿಯಾ,ನವೀನ ಶೇಟ್,ದಿವ್ಯಾ ಮೇಡಂ ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡಿದರು.ಸಭಾ ಕಾರ್ಯಕ್ರಮದ ಕೊನೆಯಲ್ಲಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡರವರು ಗುಂದ ಪ್ರೌಢಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಿದ ಜನಪ್ರತಿನಿಧಿಗಳ, ಸಾಮಾಜಿಕ ಕಾರ್ಯಕರ್ತರ,ಗಣ್ಯರ, ದಾನಿಗಳ,ಊರ ನಾಗರೀಕರ,ಹಿಂದಿನ ಶಿಕ್ಷಕ ವೃಂದದವರ,ಅಧಿಕಾರಿ ವರ್ಗದವರ,ಮಾಧ್ಯಮ ಮಿತ್ರರವರನ್ನು ಈ ಸಂದರ್ಭದಲ್ಲಿ ನೆನಪಿಸಿ,ಈ ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿದ ಗಣ್ಯರು ಗುಂಡು ಎಸೆತವನ್ನು ಎಸೆಯುವುದರ ಮೂಲಕ 2025-26 ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.