ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನ್ ಲೇನ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನದ ಪ್ರಯುಕ್ತ ಮೆಟ್ರಿಕ್ ಮೇಳ ಮಕ್ಕಳ ಸಂತೆ ಕಾರ್ಯಕ್ರಮ ಯಶಸ್ವಿಯಾಗಿ ದಿನಾಂಕ:19/12/2025 ರ ಶುಕ್ರವಾರ ಸಂಜೆ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ಮೆಟ್ರಿಕ್ ಮೇಳ ಮಕ್ಕಳ ಸಂತೆಗೆ ಆಗಮಿಸಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮವನ್ನು ಸಂತೆಯಲ್ಲಿದ್ದ ತರಕಾರಿ,ಹಣ್ಣಿನ ಮಳಿಗೆಯ ರಿಬ್ಬನ್ ನ್ನು ಕತ್ತರಿಸುವ ಮೂಲಕ ಉದ್ಘಾಟಿಸಿದ ಜೋಯಿಡಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಸಂತೆಯ ಕಲ್ಪನೆ, ಮಾರಾಟದ ಜ್ಞಾನ,ಲಾಭ ನಷ್ಟದ ಲೆಕ್ಕಾಚಾರ,ಗ್ರಾಹಕರೊಂದಿಗೆ ವ್ಯವಹರಿಸುವ ವಿಧಾನ, ಸಂತೆಯಲ್ಲಿ ಮಾರಾಟ ಮಾಡುವ ವಿವಿಧ ವಸ್ತುಗಳ ಮಾಹಿತಿ ಸೇರಿದಂತೆ ಸಂತೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಜೊತೆ, ಮಕ್ಕಳಿಗೆ ವ್ಯವಹಾರಿಕ ಜ್ಞಾನ ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಬಾಗವನ ಸರ್ ರವರು ಮೆಟ್ರಿಕ್ ಮೇಳ ಮಕ್ಕಳ ಸಂತೆಯ ಕಲ್ಪನೆ, ಉದ್ದೇಶ,ಮಕ್ಕಳಿಗೆ ಸಂತೆಯ,ವ್ಯವಹಾರ ಜ್ಞಾನದ ಅವಶ್ಯಕತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ ಶಿಕ್ಷಕರಾದ ಮಂಜುನಾಥ ಕೂಟಬಾಗಿ,ನಾಗರತ್ನಾ ಮೋಗೇರ, ಅನಿಸ್ ಪಾತೀಮಾ, ಸಂಜನಾ ಮಿರಾಶಿ,ನಿವೃತ್ತ ಶಿಕ್ಷಕಿ ಶಕುಂತಲಾ ಕುಡ್ತರಕರ ರಾಷ್ಟ್ರೀಯ ಗಣಿತ ದಿನದ ಮೆಟ್ರಿಕ್ ಮೇಳ ಮಕ್ಕಳ ಸಂತೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳ ಸಂತೆಯನ್ನು ನಡೆಸಲು ಮಾರ್ಗದರ್ಶನ,ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ, ಸದಸ್ಯರು, ಪಾಲಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಕ್ಕಳ ಸಂತೆಯಲ್ಲಿ ಸೊಪ್ಪು,ಪರಂಗಿ ಕಾಯಿ, ಮೂಲಂಗಿ,ಪಲ್ಯ ಬಾಳೆಕಾಯಿ ಸೇರಿದಂತೆ ಇನ್ನಿತರ ತರಕಾರಿಗಳ,ವಿವಿಧ ಹಣ್ಣಿನ,ಚಹಾ,ತಿಂಡಿತಿನಿಸಿನ ಹೋಟೆಲ್,ವಡಾಪಾವ್,ಮಂಡಕ್ಕಿ ಕಾರಾ ಗಿರಮಿಟ್,ತಂಪು ಪಾನೀಯ,ಕಿರಾಣಿ ಸಾಮಾನುಗಳ,ವಿವಿಧ ಬಗೆಯ ಭಜಿಯ ವ್ಯಾಪಾರ ಮಳಿಗೆಗಳಲ್ಲಿ ಮಕ್ಕಳು ವ್ಯಾಪಾರ ನಡೆಸಿದರು. ಮಕ್ಕಳ ಸಂತೆಯಲ್ಲಿದ್ದ ಎಲ್ಲಾ ವ್ಯಾಪಾರ ಮಳಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೇಟಿ ನೀಡಿ ಮಕ್ಕಳೊಂದಿಗೆ ವ್ಯಾಪಾರ ಮಳಿಗೆಯಲ್ಲಿನ ವಸ್ತುಗಳ ಮಾಹಿತಿ,ಬೆಲೆ,ಮಕ್ಕಳ ವ್ಯವಹಾರ ಜ್ಞಾನ ತಿಳಿದುಕೊಳ್ಳುವ ಮೂಲಕ ವಿವಿಧ ತರಕಾರಿ,ಹಣ್ಣುಗಳನ್ನು ಖರೀದಿಸಿ,ತಿಂಡಿತಿನಿಸಿನ ಸವಿಯನ್ನು ಸವಿದು ಮಕ್ಕಳ ವ್ಯವಹಾರ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲೆಯ ಮುಖ್ಯ ಶಿಕ್ಷಕರಾದ ಬಿ ಹೆಚ್ ಬಾಗವನ ಸರ್ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ ವೃಂದದವರು, ಪಾಲಕರು, ಪೋಷಕರು,ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಮಕ್ಕಳ ಸಂತೆಯಲ್ಲಿನ ವ್ಯಾಪಾರ ಮಳಿಗೆಯಲ್ಲಿನ ವಿವಿಧ ರೀತಿಯ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳಲ್ಲಿರುವ ವ್ಯವಹಾರ ಜ್ಞಾನವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.ಸಂತೆ ಮುಕ್ತಾಯದ ವೇಳೆ ಮಕ್ಕಳು ಖುಷಿಯಿಂದ ತಮಗಾದ ಖರ್ಚಿನ,ಲಾಭದ ಪ್ರಮಾಣದ ಬಗ್ಗೆ ಲೆಕ್ಕಾಚಾರದಲ್ಲಿ ಇರುವುದು ಕಂಡು ಬಂದಿತು.ಒಟ್ಟಿನಲ್ಲಿ ಹನುಮಾನಲೇನ್ ಶಾಲಾ ಆವರಣದ ಪರಿಸರವು ಸಂತೆಯ ವಾತಾವರಣದಲ್ಲಿ ರೂಪುಗೊಂಡಿತ್ತು.