ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕುಣಬಿ ಸಮಾಜ ಭವನದಲ್ಲಿ 2025-26 ನೇ ಸಾಲಿನ ಆತ್ಮ ಯೋಜನೆ,ಜೋಯಿಡಾ, ಕಾಳಿ ಪ್ರವಾಸೋದ್ಯಮ ಸಂಸ್ಥೆ,ಜೋಯಿಡಾ, ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ ಜೋಯಿಡಾ,ಗೆಡ್ಡೆ ಗೆಣಸು ಬೆಳೆಗಾರರ ಸಂಘ,ಜೋಯಿಡಾ, ಕಾಳಿ ರೈತ ಉತ್ಪಾದಕ ಕಂಪನಿ,ಕುಂಬಾರವಾಡಾ ಇವುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 17 2025 ರ ಬುಧವಾರ 12 ನೇ ಗೆಡ್ಡೆ ಗೆಣಸು ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.

ಗೆಡ್ಡೆಗೆಣಸು ಮೇಳದ ಕಾರ್ಯಕ್ರಮದಲ್ಲಿ ರಮೇಶ ನಾಯ್ಕ ಮಾಜಿ ಜಿ.ಪಂ ಸದಸ್ಯರು,ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಿಮಾ ಮಿರಾಶಿ,ಉಪಾಧ್ಯಕ್ಷ ಸಂತೋಷ ಮಂತೇರೋ, ಜೋಯಿಡಾದ ಮಿರಾಶಿಗಳಾದ ವಿನೋದ ಮಿರಾಶಿ,ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ,ವಿನಯ ದೇಸಾಯಿ ಅಧ್ಯಕ್ಷರು ಕಾಳಿ ಪ್ರವಾಸೋದ್ಯಮ ಸಂಸ್ಥೆ,ಜೋಯಿಡಾ,ರವೀಂದ್ರ ರೇಡಕರ,ಅಧ್ಯಕ್ಷರು ಗ್ರೀನ್ ಎಕ್ರೇಸ್ ಜೋಯಿಡಾ,ವಿಷ್ಣು ಡೇರೆಕರ,ಅಧ್ಯಕ್ಷರು ಗೆಡ್ಡೆ ಗೆಣಸು ಬೆಳೆಗಾರರ ಸಂಘ ಜೋಯಿಡಾ,ಕೃಷ್ಣಾ ಮಿರಾಶಿ,ಸುಶೀಲ್ ನಾಯ್ಕ,ಶಿವಪ್ರಸಾದ ಗಾಂವ್ಕರ,ಪ್ರಕಾಶ ಮೇಟಿ,ಡಾ.ಜಿ ಸತೀಶ,ಡಾ.ಹರೀಶ ಡಿ.ಕೆ,ಡಾ.ಇಮಾಮ್ ಸಾಹೇಬ್ ಜಟ್,ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎನ್ ಭಾರತಿ ಮೇಡಂ ಇನ್ನಿತರ ಗಣ್ಯರು,ಅಧಿಕಾರಿ ವರ್ಗದವರು ಯಶಸ್ವಿ ಗೆಡ್ಡೆಗೆಣಸು ಮೇಳದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ,ನಿರೂಪಣೆಯನ್ನು,ವಂದನಾರ್ಪಣೆಯನ್ನು ಸುದರ್ಶನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಡಾ.ಜಯಾನಂದ ಡೇರೆಕರರವರು ಗೆಡ್ಡೆಗೆಣಸು ಮೇಳ ಆರಂಭವಾದ ಹಿನ್ನಲೆ,ಪರಿಕಲ್ಪನೆ,ಸಹಕಾರ ನೀಡಿದ ಮಹನೀಯರು, ಕಳೆದ 11 ವರ್ಷಗಳಿಂದ ನಡೆದು ಬಂದ ಹಾದಿ,ಜನಪ್ರತಿನಿಧಿಗಳ,ಅಧಿಕಾರಿ ವರ್ಗದವರ,ಆಡಳಿತ ವ್ಯವಸ್ಥೆಯ ಪ್ರೋತ್ಸಾಹ,ಸಹಕಾರದ ಕುರಿತು ಮೇಳದಲ್ಲಿ ಹೇಳಿದರು. ಗೆಡ್ಡೆಗೆಣಸು ಮೇಳದಲ್ಲಿ ವಿವಿಧ ವಿಭಾಗದಲ್ಲಿನ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಗೆಡ್ಡೆಗೆಣಸು ಬೆಳಗಾರರಿಗೆ ಮೇಳದಲ್ಲಿ ಉಪಸ್ಥಿತರಿದ್ದ ಗಣ್ಯರ ಮೂಲಕ ಬಹುಮಾನಗಳನ್ನು ವಿತರಿಸಲಾಯಿತು.ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಡಾ.ಜಯಾನಂದ ಡೇರೆಕರ ನಡೆಸಿಕೊಟ್ಟರು.ಡಾ.ವಿನಾಯಕ ಪೈ, ರವಿಶಂಕರ ಡೇರೆಕರ,ನಿತಿನ್ ಶೆಟ್ಟಿ,ದಯಾನಂದ ಕುಮಗಾಳಕರ, ಶುಭೇಂದು ಕಾಮತ್ ಸಹಕಾರ ನೀಡಿದರು.

ಗೆಡ್ಡೆ ಗೆಣಸು ಮೇಳದಲ್ಲಿ ಸುಪ್ರಸಿದ್ಧ ಕುಣಬಿ ಮುಡ್ಲಿ ಸೇರಿದಂತೆ ಜೋಯಿಡಾದ ಬುಡಕಟ್ಟು ಜನಾಂಗದವರು ಬಳಸುವ ಗೆಡ್ಡೆ ಗೆಣಸುಗಳ ಪ್ರದರ್ಶನ, ಸ್ಪರ್ಧೆ,ಮಾರಾಟ ಹಾಗೂ ಆಹಾರ ಮೇಳ ನಡೆಯಿತು. ತಾಲೂಕಿನ ನಾಗೋಡಾ, ಉಳವಿ, ಕಾತೇಲಿ(ಕುಂಬಾರವಾಡಾ), ಗಾಂಗೋಡಾ,ಅಣಶಿ ಸೇರಿದಂತೆ ಇನ್ನುಳಿದ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆಡ್ಡೆಗೆಣಸು ಬೆಳೆಗಾರರು ತಮ್ಮ ಇನ್ನಿತರ ಬೆಳೆಗಾಳದ ತರಕಾರಿ, ಹಣ್ಣುಗಳನ್ನು,ಜೇನುತುಪ್ಪ ಮಾರಾಟಕ್ಕೆ ತಂದಿದ್ದರು.ವಿವಿಧ ಖಾದ್ಯಗಳ ತಿಂಡಿಗಳ ಮಳಿಗೆ,ಕರಕುಶಲ ಚಾಪೆ,ಬುಟ್ಟಿಗಳ ಮಾರಾಟ ಕಂಡು ಬಂದವು. ತಾಲೂಕಿನ ಜನರಲ್ಲದೇ ಬೇರೆ,ಬೇರೆ ಊರುಗಳಿಂದಲೂ ಜನರು ಆಗಮಿಸಿ ಗೆಡ್ಡೆಗೆಣಸು ಮೇಳದಲ್ಲಿ ತಮಗೆ ಬೇಕಾದ ವಿವಿಧ ವಸ್ತುಗಳನ್ನು ಖರೀದಿಸುವುದು ಜೋರಾಗಿ ಕಂಡು ಬಂದಿತು. ಈಗಾಗಲೇ ರಾಜ್ಯ ಸರ್ಕಾರವು ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ಕೃಷಿಯ ತಾಲೂಕೆಂದು ಘೋಷಿಸಿರುವ ನಿರ್ಣಯ ಗೆಡ್ಡೆಗೆಣಸು ಬೆಳಗಾರರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.ಮಹಿಳೆಯರ ಸ್ವಾವಲಂಬಿ ಜೀವನಕ್ಕೆ,ಆರ್ಥಿಕ ಭದ್ರತೆಗೆ ದಾರಿಯಾಗಿದೆ.

ಯಶಸ್ವಿ 12 ನೇ ಗೆಡ್ಡೆಗೆಣಸು ಮೇಳದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಧಿಗಳು,ಅಧಿಕಾರಿ ವರ್ಗದವರಿಗೆ,ರೈತರಿಗೆ,ರೈತ ಮಹಿಳೆಯರಿಗೆ,ಆಡಳಿತ ವ್ಯವಸ್ಥೆಗೆ,ಪ್ರತ್ಯಕ್ಷ,ಪರೋಕ್ಷ ವಾಗಿ ಸಹಕರಿಸಿದ ಎಲ್ಲರಿಗೂ ಸಂಘಟಕರು ಅಭಿನಂದನೆಗಳನ್ನು ಸಲ್ಲಿಸಿದರು.