ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧರಿಸಿ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಿಸುತ್ತಿದ್ದ ಮಿನಿ ಲಾರಿ ಹಾಗೂ ಅದರ ಚಾಲಕನನ್ನು ಬಂಧಿಸಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಸೋಮವಾರ ಮಧ್ಯಾಹ್ನ ಸುಮಾರು 1.45 ಗಂಟೆ ಸಮಯದಲ್ಲಿ ಅನಮೋಡ ಅಬಕಾರಿ ತನಿಖಾ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ, ಅಬಕಾರಿ ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ, ವಿಕ್ರಮ ಬಿಡಿಕರ್, ಈರಣ್ಣ ಗಾಳಿ ಹಾಗೂ ಎಂ.ಎಚ್. ಆನವಟ್ಟಿಯವರು ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಇಚರ್ ಕಂಪೆನಿಯ ಪ್ರೊ–2095 ಮಿನಿ ಲಾರಿ ಗೋವಾದಿಂದ ರಾಮನಗರದ ಕಡೆಗೆ ಸಾಗುತ್ತಿದ್ದುದನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18.78 ಮಿಲಿಲೀಟರ್ ಮದ್ಯ (ಗೋವಾ ರಾಜ್ಯದ ಮದ್ಯ) ಪತ್ತೆಯಾಗಿದೆ.

ಪತ್ತೆಯಾದ ಮದ್ಯವನ್ನು ಹಾಗೂ ಮಿನಿ ಲಾರಿ ವಾಹನವನ್ನು ಜಪ್ತುಪಡಿಸಿಕೊಂಡು, ಆರೋಪಿಯೊಂದಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಅಬಕಾರಿ ಉಪನಿರೀಕ್ಷಕರು ದಾಂಡೇಲಿ ವಲಯ ಕಚೇರಿಗೆ ಹಸ್ತಾಂತರಿಸಿದ್ದಾರೆ.