ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಆಮದಳ್ಳಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಎಲ್ ಪಿಜಿ ಗ್ಯಾಸ್ ಕಿಟ್ ಸಂಪರ್ಕ ಹೊಂದಿರುವ ಆಟೋರಿಕ್ಷಾ ಸ್ಪೋಟಗೊಂಡು,ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ. ಸಿಫ್ರೆನ್ ಥಾಮಸ್ ಫರ್ನಾಂಡೀಸ್ ಅವರಿಗೆ ಸೇರಿದ ಬಜಾಜ್ ಮ್ಯಾಕ್ಸಿಮೋ ಆಟೋರಿಕ್ಷಾಗೆ ಅಳವಡಿಸಿದ್ದ ಎಲ್ ಪಿಜಿ ಗ್ಯಾಸ್ ಕಿಟ್ ನಿಂದ ಬೆಂಕಿ ಹೊತ್ತಿದ್ದು ಬಳಿಕ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.ಸ್ಪೋಟದ ತೀವ್ರತೆಗೆ ಆಟೋ ಸೇರಿದಂತೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಮೂರು ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸ್ಥಳೀಯರು ಕೂಡಲೇ ಅಗ್ನಿ ನಂದಿಸಲು ಪ್ರಯತ್ನಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಕೊನೆಗೂ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ಕುರಿತು ಕಾರವಾರದ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆದಿದೆ.