ಸುದ್ದಿ ಕನ್ನಡ ವಾರ್ತೆ
ನವದೆಹಲಿ:ಉತ್ತರಕನ್ನಡ ಜಿಲ್ಲೆಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿರವರು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ನಮ್ಮ ಜಿಲ್ಲೆಯ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಾದ ಬನವಾಸಿ ಮತ್ತು ಗೋಕರ್ಣವನ್ನು ಕೇಂದ್ರೀಕರಿಸಿ, ಜಿಲ್ಲೆಯ ಪ್ರವಾಸೋದ್ಯಮ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮಹತ್ವದ ಕುರಿತು ಮನವಿ ನೀಡಿದರು.
ವಿಶೇಷವಾಗಿ, ಮಾನ್ಯ ಸಚಿವರು ಈ ಹಿಂದೆ ಗೋಕರ್ಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯದ ಕುರಿತು ಸಕಾರಾತ್ಮಕ ಚರ್ಚೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ, ಇಂದು ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಮನವಿಯನ್ನು ಅವರಿಗೆ ಸಲ್ಲಿಸಿದರು.
ಸಂಸದರ ಮನವಿಯನ್ನು ಆಲಿಸಿದ ಸಚಿವರು, ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನೀಲಿ ನಕ್ಷೆಯೊಂದಿಗೆ (Blue Print) ಸೂಕ್ತ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿದೆ ಎಂದು ತಿಳಿಸಿದರು. ಅಲ್ಲದೆ, ಈ ಕುರಿತು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
