ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ಮುಂಡಿಗೇಸರದ ಬಹುಮುಖ ಪ್ರತಿಭೆ ಎಂ.ವಿ.ಶ್ರೇಯಾ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೊಡಮಾಡುವ ೨೦೨೨–೨೩ನೇ ಸಾಲಿನ ‘ಅಕಾಡೆಮಿ ಬಾಲಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಶಿಕ್ಷಕ ದಂಪತಿಗಳಾದ ವಿಶ್ವೇಶ್ವರ ಹೆಗಡೆ, ಶಶಿಕಲಾ ಎಸ್. ಶಿಕ್ಷಕ ದಂಪತಿಯ ಪುತ್ರಿಯಾದ ಈಕೆ ಬೆಂಗಳೂರಿನ ಸಿಎಂಆರ್‌ಐಟಿ ಕಾಲೇಜಿನಲ್ಲಿ ಸದ್ಯ ವ್ಯಾಸಂಗ ಮಾಡುತ್ತಿದ್ದಾರೆ.

ಏಕಪಾತ್ರಭಿನಯದಲ್ಲಿ ಸೈ ಎನಿಸಿಕೊಂಡಿರುವ ಶ್ರೇಯಾ ತನ್ನ ಭಾವಾಭಿನಯ, ಬಹುವಿಧದ ನಟನೆಯ ಮೂಲಕ ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿದ್ದಾರೆ. ಸತತ ೨ ಬಾರಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಚಿಕ್ಕ ವಯಸ್ಸಿಗೆ ಭರತನಾಟ್ಯ ಕಲೆಯಲ್ಲಿ ಪ್ರೌಢಿಮೆ ಸಾಧಿಸಿರುವುದು ಈಕೆ, ನೃತ್ಯ ಗುರು ಸೀಮಾ ಭಾಗ್ವತ್ ಬಳಿ ಭರತನಾಟ್ಯ ಸೀನಿಯರ್ ತರಬೇತಿ ಪೂರ್ಣಗೊಳಿಸಿದ್ದಾರೆ. ಐದನೆ ವಯಸ್ಸಿಗೆ ಭರತನಾಟ್ಯ ಕಲೆಯಿಂದ ಆಕರ್ಷಿಗೊಂಡು ಸಣ್ಣ ವಯಸ್ಸಿಗೆ ಭರತನಾಟ್ಯ ಹೆಜ್ಜೆ ರೂಢಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಹಲವು ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶನ ನೀಡಿದ್ದಾರೆ.
ರಂಗಭೂಮಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಶ್ರೇಯಾ ನಟನೆಯಲ್ಲಿ ತೋರುವ ಚಾಕಚಕ್ಯತೆ ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸುತ್ತದೆ. ಯಕ್ಷಗಾನ ಕಲೆಯತ್ತಲೂ ಒಲವು ಬೆಳೆಸಿಕೊಂಡು ಅದನ್ನೂ ಕಲಿತಿದ್ದಾಳೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಕ್ಷಗಾನ ಹೆಜ್ಜೆ ಹಾಕಿ ಪ್ರಶಸ್ತಿ ಗಳಿಸುವ ಮೂಲಕ ಈ ಕಲೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.
ಚೆಸ್ ಆಟದಲ್ಲೂ ಚುರುಕಾಗಿರುವ ಶ್ರೇಯಾ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಲೆ, ಕ್ರೀಡೆ, ಹವ್ಯಾಸಿ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಕಲೆಗಳ ಜೊತೆಗೆ ಹವ್ಯಾಸದಲ್ಲೂ ಚಾಕಚಕ್ಯತೆ ಹೊಂದಿದ್ದು ಹಳೆಯ ಸಿ.ಡಿ., ಕಲ್ಲು, ಗೋಡೆ ಹೀಗೆ ಅವಕಾಶ ಸಿಕ್ಕ ಕಡೆಯಲ್ಲಿ ಅಂದದ ಚಿತ್ರ ಬಿಡಿಸುವ ಹವ್ಯಾಸವಿದೆ. ಇನ್ನು ಶ್ರೇಯಾ ಶೈಕ್ಷಣಿಕ ಸಾಧನೆಯಲ್ಲೂ ಹಿಂದೆ ಬಿದ್ದಿಲ್ಲ.
೨೦ಕ್ಕೂ ಹೆಚ್ಚು ಕಲೆ, ಹವ್ಯಾಸಗಳಲ್ಲಿ ನೈಪುಣ್ಯತೆ ಸಾಧಿಸಿರುವ ಶ್ರೇಯಾ ಅವರಿಗೆ ಬಹುಮುಖ ಪ್ರತಿಭೆ ವಿಭಾಗದಲ್ಲಿ ಅಕಾಡಮಿಯು ಪ್ರಶಸ್ತಿ ನೀಡುತ್ತಿದೆ.

ಡಿ.೧೬ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.