ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಗ್ರಾಮದಲ್ಲಿ ಗೆಳೆಯರ ಬಳಗ ಗುಂದದವರು ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯ ಮೇಲೆ ಗಣ್ಯರನ್ನು ಆಹ್ವಾನಿಸಲಯಿತು.ನಂತರ ಅವುರ್ಲಿಯ ರುಕ್ಮಿಣಿ ರಾಮಚಂದ್ರ ವೇಳಿಪರವರು ಸುಶ್ರಾವ್ಯವಾಗಿ ಶ್ರೀ ಗಣೇಶನ ಭಕ್ತಿಗೀತೆಯನ್ನು ಹಾಡುವ ಮೂಲಕ ಪ್ರಾರ್ಥಿಸಿದರು.ವೇದಿಕೆಯ ಮೇಲಿನ ಗಣ್ಯರಿಗೆ ಸಂಘಟಕರು ಹೂಗುಚ್ಛವನ್ನು ನೀಡುವುದರ ಮೂಲಕ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರಾದ ಲಕ್ಷ್ಮಣ ಬರ್ಸೇಕರ,ಅರುಣ ದೇಸಾಯಿ,ಧವಳೋ ಸಾವರ್ಕರ್, ಮಂಜುನಾಥ ಭಾಗ್ವತ, ಚಂದ್ರಶೇಖರ ಸಾವರಕರ,ಶೋಭಾ ಎಲ್ಲೇಕರ,ಉಮಾಮಹೇಶ್ವರ ಹೆಗಡೆ,ಮಹಾದೇವ ಕುಟ್ಟಿಕರ,ಗಣೇಶ ವೇಳಿಪ ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ಘಾಟಕರು,ಅಣಶಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಲಕ್ಷ್ಮಣ ಬರ್ಸೇಕರ ಮಾತನಾಡಿ ನಮ್ಮ ಗುಂದ ಗ್ರಾಮದಲ್ಲಿ ಬಹಳ ವರ್ಷಗಳ ಬಳಿಕ ಊರಿನ ಯುವಕರು ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಲವು ಅಡತಡೆಯ ನಡುವೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.ಯುವಕರ ಕಾರ್ಯಕ್ಕೆ ಸದಾ ನಮ್ಮೆಲ್ಲರ ಬೆಂಬಲ ಇರಲಿದೆ, ನಮ್ಮ ನಂದಿಗದ್ದೆ ಗ್ರಾಮ ಪಂಚಾಯತವು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದು ಗಾಂಧಿಗ್ರಾಮ ಪುರಸ್ಕೃತರಾದ ಬಗ್ಗೆ ಅಧ್ಯಕ್ಷ,ಉಪಾಧ್ಯಕ್ಷೆ,ಸರ್ವ ಸದಸ್ಯರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿಯ ಸಪ್ತಸ್ವರ ಸೇವಾ ಸಂಸ್ಥೆ,ಪ್ರೇರಣಾ ಸಂಸ್ಥೆಯವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ನಮಗೆಲ್ಲಾ ಗೊತ್ತಿರುವ ವಿಷಯ,ಇವತ್ತು ಗುಂದದ ಗೆಳೆಯರ ಬಳಗದದವರು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ.ಯಾವುದೇ ಕಾರ್ಯಕ್ರಮದ ಸಂಘಟನೆ ಅಷ್ಟು ಸುಲಭವಲ್ಲ,ಕಾರ್ಯಕ್ರಮದ ಸಂಘಟನೆಗೆ ತುಂಬಾ ಶ್ರಮ ವಹಿಸಬೇಕಾಗುತ್ತದೆ.

ಇಂದು ನಗರ ಪ್ರದೇಶದಲ್ಲಿ ಸಮಯಮಿತಿ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿದೆ.ಹಳ್ಳಿಗಾಡಿನ ಪ್ರದೇಶದಲ್ಲಿ ಸಾಂಸ್ಕೃತಿಕ ಉತ್ಸವಗಳ ಜೀವಂತಿಕೆ ಹಾಗೂ ಸೊಗಡನ್ನು ಕಾಣಬಹುದಾಗಿದೆ. ಸಾಂಸ್ಕೃತಿಕ ಉತ್ಸವದಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗದ ಪ್ರದರ್ಶನ ಮಾಡುತ್ತಿರುವ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕಟ್ಟಿಗೆಯ ಕಲಾವಿದರಿಗೆ,ಸಂಘಟಕರಿಗೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿ,ಕಟ್ಟಿಗೆಯ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾಗಿದ್ದ ದಿವಂಗತ ಬೊಂಬ್ಯಾ ಕೇರಕಾರ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಕಾರ್ಯಕ್ರಮದ ಸಂಘಟಕಲ್ಲಿ ಒಬ್ಬರಾದ,ಉತ್ತರಕನ್ನಡ ಜಿಲ್ಲಾ ಕುಣಬಿ ಸಮಾಜದ ಕಾರ್ಯದರ್ಶಿಗಳಾದ ಚಂದ್ರಶೇಖರ ಸಾವರಕರ ಮಾತನಾಡಿ ಊರಿನ ಗುರುಹಿರಿಯರ,ಯುವಕರ ಇಚ್ಛೆಯಂತೆ ಅವರ ಸಹಕಾರ,ಪ್ರೋತ್ಸಾಹ,ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ನಮ್ಮ ಊರಿನಲ್ಲಿ ಹಮ್ಮಿಕೊಂಡಿರುವ ಬಗ್ಗೆ ಹೆಮ್ಮೆ ಇದೆ.ಈ ಕಾರ್ಯಕ್ರಮವನ್ನು ಆಯೋಜಿಸಲು ತುಂಬಾ ಶ್ರಮ ವಹಿಸಿದ್ದು,ತುಂಬಾ ಅಡೆತಡೆಯ ನಡುವೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಎಲ್ಲರ ಸಹಕಾರದಿಂದ ಎಂದು ಹೇಳಿ,ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯರಮುಖ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಜುನಾಥ ಭಾಗ್ವತ ಮಾತನಾಡಿ ಕಾರ್ಯಕ್ರಮದ ಸಂಘಟಕರಿಗೆ ಹಲವು ಅಡೆತಡೆಗಳು ಬರುವುದು,ಸಂಘಟಕನಾಗಿ ನನಗೆ ಅನುಭವವಿದ್ದು, ಎಲ್ಲವನ್ನು ಎದುರಿಸಿ ಕಾರ್ಯಕ್ರಮವನ್ನು ನಡೆಸುವುದು ನಮ್ಮೆಲ್ಲರ ಧೈರ್ಯದ ಮೇಲಿದೆ.ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು.

ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯೆ ಕಾರ್ಯಕ್ರಮದಲ್ಲಿ ಮಾತನಾಡಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ,ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೇನೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ ಮಾತನಾಡಿ ಊರಿನ ಯುವಕರು ಮನಸ್ಸು ಮಾಡಿದರೆ ಎಂತಹ ಕಾರ್ಯಕ್ರಮಗಳನ್ನು ಮಾಡಬಹುದು,ನಮ್ಮ ಜೋಯಿಡಾ ತಾಲೂಕಿನಲ್ಲಿಯೇ ಗುಂದವು ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ ಊರು ಎಂಬ ಖ್ಯಾತಿಯನ್ನು ಪಡೆದಿದೆ.ಈ ಊರಿನ ಗ್ರಾಮಸ್ಥರು ವಿಶೇಷವಾಗಿ ಸುಗ್ಗಿಯ ಸಮಯದಲ್ಲಿನ ಆಚರಣೆಯು ಎಲ್ಲರ ಗಮನ ಸೆಳೆಯುವಂತದ್ದು.ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಭಿವೃದ್ಧಿಯ ಕಾರ್ಯಸೇರಿದಂತೆ, ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮ ಸಹಕಾರ ನಿರಂತರ ಇರಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.ಕಾರ್ಯಕ್ರಮಕ್ಕೆ ಧನ ಸಹಾಯ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಊರಿನ ಹಿರಿಯರಾದ ಮಹಾದೇವ ಕುಟ್ಟಿಕರ,ಗಣೇಶ ವೇಳಿಪ, ಉಮಾಮಹೇಶ್ವರ ಹೆಗಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಭಾ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ವಂದನಾರ್ಪಣೆಯನ್ನು ಸಲ್ಲಿಸಲಾಯಿತು.ಕಾರ್ಯಕ್ರಮದ ಸ್ವಾಗತ,ನಿರೂಪಣೆ,ವಂದನಾರ್ಪಣೆಯನ್ನು ಅವುರ್ಲಿಯ ಸುನೀಲ ಶೇಟಕರರವರು ಅತ್ಯುತ್ತಮವಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸ್ಥಳವಕಾಶ ನೀಡಿದ ಕೃಷ್ಣಾ ಬಾಂದೇಕರ ಹಾಗೂ ಕಟ್ಟಿಗೆ ಯಕ್ಷಗಾನ ಮಂಡಳಿಯ ಕಲಾವಿದರಾದ ಲಕ್ಷ್ಮಣ ಕುಣಬಿಯವರನ್ನು ಸಂಘಟಕರು,ಗಣ್ಯರು ಸನ್ಮಾನಿಸಿದರು. ನಂತರ ಸ್ಥಳೀಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕಟ್ಟಿಗೆಯವರ ವತಿಯಿಂದ ನಡೆದ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗದ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.ಕಾರ್ಯಕ್ರಮದ ಸಂಘಟಕರು ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ಮಾಡಿದರು. ಕಾರ್ಯಕ್ರಮಕ್ಕೆ ತನು ಮನ ಧನದ ಸಹಕಾರ ನೀಡಿದ ಎಲ್ಲರಿಗೂ ಸಂಘಟಕರು ಧನ್ಯವಾದಗಳನ್ನು ಸಲ್ಲಿಸಿದರು.