ಸುದ್ದಿ ಕನ್ನಡ ವಾರ್ತೆ

ಶಿರಸಿ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಲಕ್ಷಿಸಿ ಜನರ ಸಾವಿನ ಮೇಲೆ ತನ್ನ ರಾಜ್ಯಭಾರವನ್ನು ಮಾಡುತ್ತಿರುವಂತೆ ಭಾಸವಾಗುತ್ತಿದೆ.

ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯ ಶೇಕಡಾ 80% ರಷ್ಟು ಪೂರ್ಣಗೊಂಡು ಒಂದು ವರ್ಷಕ್ಕಿಂತಲೂ ಅಧಿಕ‌ ಸಮಯ ಆದರೂ ಸಹ, ಇದುವರೆಗೂ ಆಸ್ಪತ್ರೆಗೆ ಸಂಬಂಧಿಸಿ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಆರಂಭಗೊಳ್ಳದಿರುವುದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಹಿರಿಯರಾಗಿರುವ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯವಾಗಿದೆ. ಇದನ್ನು ಖಂಡಿಸಿ ಡಿಸೆಂಬರ್ 16, ಮಂಗಳವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗುತ್ತಿದೆ. ಇದು ಕೇವಲ ಯಾರ ವಿರುದ್ಧದ ಹೋರಾಟವಲ್ಲ. ಕ್ಷೇತ್ರದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಪಕ್ಷಬೇಧ ಮರೆತು ಈ ಆಸ್ಪತ್ರೆ ಹೋರಾಟಕ್ಕೆ ಭಾಗವಹಿಸಬೇಕೆಂದು ಬಿಜೆಪಿ ಮುಖಂಡ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.

ಶನಿವಾರ ಶಿರಸಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ‌ ಅಪಘಾತಗಳಿಗೆ ಒಳಗಾಗಿ ಮಾರ್ಗಮಧ್ಯೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಶಿರಸಿಯಲ್ಲಿ ಅಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ 250 ಹಾಸಿಗೆಗಳ ಆಸ್ಪತ್ರೆಗೆ ನಾಂದಿ ಹಾಡಲಾಗಿತ್ತು. ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರಕಾರ ಆಸ್ಪತ್ರೆಯನ್ನು ಬಿಜೆಪಿ ಅವಧಿಯಲ್ಲಿ ಆರಂಭಗೊಂಡಿರುವ ಆಸ್ಪತ್ರೆಯನ್ನು ರಾಜಕೀಯ ಕಾರಣಕ್ಕಾಗಿ ನಿರ್ಮಾಣ ಹಂತದಲ್ಲಿ ನಿಧಾನಗೊಳಿಸಲಾಗುತ್ತಿದೆ. ಈಗಲೇ ಆಸ್ಪತ್ರೆ ನಿರ್ಮಾಣವಾದರೆ ಅದರ ಕ್ರೆಡಿಟ್ ಬಿಜೆಪಿ ಸರಕಾರಕ್ಕೆ‌ದೊರೆಯುತ್ತದೆ, ಬದಲಾಗಿ ಮುಂಬರುವ ಚುನಾವಣೆ ಸಮಯಕ್ಕೆ ಆಸ್ಪತ್ರೆ ಪೂರ್ಣಗೊಳಿಸಿದರೆ, ಆಗ ಕ್ರೆಡಿಟ್ ತಮಗೆ ಬರುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ ಎನಿಸುತ್ತದೆ. ಇದನ್ನು ಶಿರಸಿಯ ಸಮಸ್ತ ನಾಗರಿಕರ ಪರವಾಗಿ ವಿರೋಧಿಸುವುದು ಅನಿವಾರ್ಯವಾಗಿದೆ.

ಈ ಹಿಂದೆ ಘೋಷಿಸಲಾಗಿದ್ದ ಆಸ್ಪತ್ರೆಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಹಾಗು ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಡಿಸೆಂಬರ್ 4 ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಿಂದ ಆಸ್ಪತ್ರೆ ವೈದ್ಯಕೀಯ ಉಪಕರಣ ಹಾಗು ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಹುದ್ದೆಗಳು ಮಂಜೂರಾಗಿಲ್ಲ ಹಾಗು ಯಂತ್ರೋಪಕರಣಗಳು ಸರಬರಾಜು ಆಗಿಲ್ಲ ಎಂಬ ಉತ್ತರ ದೊರಕಿದೆ. ಈ ಪ್ರಸ್ತಾವನೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಳಿಯಿದ್ದು, ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲದಿರುವುದಾಗಿ ಉತ್ತರ ನೀಡಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಇದೊಂದು ದೊಡ್ಡ ಗೋಡೌನ್ ಆಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ವೈದ್ಯಕೀಯ ಉಪಕರಣಗಳಿಗೆ ಆದಷ್ಟು ಕೂಡಲೇ ಟೆಂಡರ್ ಕರೆಯಬೇಕು ಮತ್ತು ತಜ್ಞ ವೈದ್ಯರ ನೇಮಕಾತಿ ನಡೆಯಬೇಕು ಎಂದು ಆಗ್ರಹಿಸಿ ಬೆಳಗಾವಿಯ‌ ಸುವರ್ಣ ಸೌಧದೆದುರು ಪ್ರತಿಭಟನೆ ನಡೆಸಿ, ಸಚಿವರುಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

ಪ್ರಮುಖರಾದ ಉಷಾ ಹೆಗಡೆ ಮಾತನಾಡಿ, ಈ ಹಿಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅವಧಿಯಲ್ಲಿ ಜನರಿಗೆ ತೊಂದರೆಯಾಗಬಾರದು ಎಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಹಾಲಿ ಶಾಸಕರು ಅದರ ಬಗ್ಗೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಶಾಸಕರು ಇನ್ನೂ ಜವಾಬ್ದಾರಿ ತೋರುತ್ತಿಲ್ಲ. ಈ ಕೂಡಲೇ ಆಸ್ಪತ್ರೆ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಬೇಕಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಹಲಸರಿಗೆ, ಬಿಸ್ಲಕೊಪ್ಪ ಪಂಚಾಯತ ಸದಸ್ಯ ರಾಘವೇಂದ್ರ ನಾಯ್ಕ, ಮತ್ತೀಘಟ್ಟ ಪಂಚಾಯತ ಸದಸ್ಯ ನಾರಾಯಣ ಹೆಗಡೆ, ಅಂಕಿತ್ ಹೆಗಡೆ ಇದ್ದರು.