ಸುದ್ದಿ ಕನ್ನಡ ವಾರ್ತೆ

ದಾಂಡೇಲಿ–ಅಳ್ನಾವರ ನಡುವೆ ದೀರ್ಘಕಾಲದಿಂದ ಸ್ಥಗಿತವಾಗಿದ್ದ ರೈಲು ಸಂಚಾರ ಪುನರಾರಂಭವಾಗುವ ದಿಸೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಕೇಂದ್ರ ನೈರುತ್ಯ ರೈಲ್ವೆಯು ಈ ಮಾರ್ಗದಲ್ಲಿ DEMU ರೈಲು ಸೇವೆ ಆರಂಭಿಸಲು ಅಧಿಕೃತ ಅನುಮೋದನೆ ನೀಡಿದ್ದು, ದಾಂಡೇಲಿ ಜನತೆಯ ಬಹುಕಾಲದ ಬೇಡಿಕೆೆ ಸಾಕಾರಗೊಳ್ಳುತ್ತಿದೆ.

ಮುಖ್ಯವಾಗಿ ಮಾನ್ಯ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಈ ಹಿಂದೆ ಪತ್ರ ಬರೆದು ಹಾಗೂ ವೈಯಕ್ತಿಕವಾಗಿ ಭೇಟಿಯಾಗಿ ದಾಂಡೇಲಿ-ಅಳ್ನಾವರ ರೈಲು ಸೇವೆ ಪುನರಾರಂಭಿಸುವಂತೆ ವಿನಂತಿಸಿದ್ದೆ. ಕೆಲದಿನಗಳ ಹಿಂದೆ ಶ್ರೀ ವಿ. ಸೋಮಣ್ಣ ಅವರು ಕಾರವಾರಕ್ಕೆ ಬಂದ ಸಂದರ್ಭದಲ್ಲಿ ಸದರಿ ರೈಲು ಪುನರಾರಂಭವಾಗುವ ಬಗ್ಗೆ ಮಾಹಿತಿ ನೀಡಿದ್ದರು.

ಈ ರೈಲು ಸೇವೆಯ ಪುನರಾರಂಭದಿಂದ ಹುಬ್ಬಳ್ಳಿ-ಬೆಳಗಾವಿಗೆ ಮುಖ್ಯ ರೈಲ್ವೆ ಮಾರ್ಗಕ್ಕೆ ಸಂಪರ್ಕ ಸಿಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸ್ಥಳೀಯರಿಗೆ ತುಂಬಾ ಅನುಕೂಲವಾಗುವುದರ ಜೊತೆಗೆ, ಈ ಪ್ರದೇಶದ ಸಂಪರ್ಕ, ವ್ಯಾಪಾರ, ಶಿಕ್ಷಣ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಅದರಲ್ಲಿಯೂ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.

ಆದಷ್ಟೂ ಶೀಘ್ರವಾಗಿ ಸದರಿ ರೈಲು ಸೇವೆಯ ಪುನರಾರಂಭದ ದಿನಾಂಕವನ್ನು ಘೋಷಣೆ ಮಾಡುವಂತಾಗಲಿ.

ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಈ ಭಾಗದ ಜನರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು  ಶಾಸಕ ಆರ್.ವಿ.ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.