ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ಮತ್ತು ಅಳ್ನಾವರ ನಡುವೆ ಬಹುದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನೈರುತ್ಯ ರೈಲ್ವೆಯು ಈ ಮಾರ್ಗದಲ್ಲಿ ಡಿಇಎಂಯು (DEMU) ರೈಲು ಸೇವೆಯನ್ನು ಆರಂಭಿಸಲು ಅನುಮೋದನೆ ನೀಡಿದೆ. ಈ ಮೂಲಕ ದಾಂಡೇಲಿ ಜನತೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಉತ್ತರ ಕನ್ನಡ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನ, ಪರಿಶ್ರಮ ಮತ್ತು ಪ್ರಸ್ತಾವನೆಯ ಫಲವಾಗಿ ನೈರುತ್ಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ.
ಈ ಮಹತ್ವದ ರೈಲು ಸೇವೆ ಪುನರಾರಂಭದ ಪ್ರಸ್ತಾವನೆಯನ್ನು ಪುರಸ್ಕರಿಸಿ, ಅನುಮೋದನೆ ನೀಡಿದ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯಕ್ಕೆ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ
ಇವರಿಗೆ ಸಂಸದರು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದು, ಸ್ಥಳೀಯ ಜನರಿಗೆ ಅನುಕೂಲವಾಗುವ ಈ ನಿರ್ಧಾರವು ಈ ಪ್ರದೇಶದ ಸಂಪರ್ಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಡಿಇಎಂಯು ರೈಲು ಸೇವೆ ಪ್ರಾರಂಭಿಸುವುದರಿಂದ ದಾಂಡೇಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನೈರುತ್ಯ ರೈಲ್ವೆಯು ಶೀಘ್ರದಲ್ಲಿಯೇ ಈ ಸೇವೆಯ ಪ್ರಾರಂಭದ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
