ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲನಿಯನ್ನು ‘ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ’ ಎಂದು ಘೋಷಿಸುವ ಕುರಿತು.
ಮಾನ್ಯರೇ,
ಮೇಲೆ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಉತ್ತರ ಕನ್ನಡ ಜಿಲ್ಲೆಯು ಭಾರೀ ಜಲವಿದ್ಯುದ್ಯೋಜನೆ, ಅಣುಸ್ಥಾವರ,ಸೀಬರ್ಡ್ ನೌಕಾನೆಲೆ ಯೋಜನೆ, ಕೊಂಕಣ ರೇಲ್ವೆ, ಬೃಹತ್ ಬಂದರು ನಿರ್ಮಾಣಗಳಿಂದ ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ, ಮೂವತ್ತರಿಂದ ನಲವತ್ತು ಸಾವಿರದಷ್ಟೂ ಕುಟುಂಬಗಳು ತಮ್ಮ ಮನೆ-ಮಠ ಕಳೆದುಕೊಂಡಿವೆ.
ಪ್ರತಿಯಾಗಿ ನೋವು, ಹತಾಶೆ, ನಿರುದ್ಯೋಗ, ಸೌಲಭ್ಯ ವಂಚಿತವಾದವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜಿಲ್ಲೆಯ ಜನರ ಹಾಗೂ ಜನಪ್ರತಿನಿಧಿಗಳ ಬೇಡಿಕೆ, ಮನವಿ, ಹೋರಾಟ, ಪ್ರತಿಭಟನೆಗಳಿಗೆ ಸಬೂಬುಗಳನ್ನು ಹೇಳಿಯೋ, ನಂಬಿಸುವ ಮಾತುಗಳನ್ನಾಡಿಯೋ ವಂಚಿಸಲಾಯಿತು, ಅನೇಕ ಹೋರಾಟಗಾರರು ಇಂದಿಲ್ಲ, ಉಭಯ ಸರ್ಕಾರಗಳು ಅವರಿಗೆ ಕೊಟ್ಟ ಮಾತುಗಳನ್ನೀಡೇರಿಸಿಲ್ಲ, ಇದರಿಂದ ಪ್ರತಿಭಾನ್ವಿತ ಯುವ ಜನಾಂಗವು ಉದ್ಯೋಗವರಸಿ ದೇಶದ ವಿವಿಧ ಭಾಗಗಳಿಗೆ, ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋಗಿದ್ದಾರೆ, ಹಳ್ಳಿಗಳು ವೃದ್ದಾಶ್ರಮವಾಗಿವೆ ,ಈಗಲೂ ಅದೇ ಮುಂದುವರಿದಿದೆ. ಇದರಿಂದ ಸರ್ಕಾರಗಳು ಉತ್ತರ ಕನ್ನಡ ಜನತೆಯ ತ್ಯಾಗ, ಸಂಯಮ, ಸನ್ನಡತೆಯನ್ನು ಉಪೇಕ್ಷಿಸುತ್ತಿವೆ ಮತ್ತು ನಮ್ಮ ಸದ್ಗುಣಗಳ ದುರ್ಲಾಭ ಪಡೆಯುತ್ತಿವೆ ಎಂದು ಆರೋಪಿಸುವ ಸನ್ನಿವೇಶ ನಿರ್ಮಾಣವಾಗಿದೆ.
ಆದರೆ ಇನ್ನೂ ಹೀಗೆಯೇ ಸುಮ್ಮನಾಗುವ ಸಂಯಮ ಉಳಿಯಲಾರದು ಗಂಭೀರವಾದ ಮುನ್ನಡೆಗಳಿಗೆ ಅವಕಾಶ ನೀಡದೇ ನಮ್ಮ ಈ ಕೆಳಗಿನ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ವಿನಂತಿಸುತ್ತೇವೆ.
1) ಸಾಫ್ಟ್ ವೇರ್ ಪಾರ್ಕ್:
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ 300 ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದ್ದು, ಇದು ಮೂಲತಹ ಬೇಡ್ತಿ ಯೋಜನೆಗಾಗಿ ಕೆ.ಪಿ.ಸಿಗೆ ಕಾಲನಿ ನಿರ್ಮಾಣ ಮಾಡಲು ರೂಪಿಸಿದ್ದು ನಿರ್ಜನವಾಗಿದೆ, ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ.ಆ ಜಾಗವನ್ನುಫಾರೆಸ್ಟ್ ಇಲಾಖೆಯಿಂದ ಮರಳಿ ಪಡೆದು Karnataka Industrial Areas Development Board ಮುಖಾಂತರ ಟೆಕ್ ಪಾರ್ಕ್ / ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಿದರೆ ಇಲ್ಲಿನ ಯುವಕರು ವಲಸೆ ಹೋಗುವುದನ್ನು ತಪ್ಪಿಸ ಬಹುದು
ಈ ಮಾಗೋಡು ಕಾಲನಿಯು ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಕೇವಲ 75 ಕಿ.ಮಿ.ಅಂತರದಲ್ಲಿದೆ. ಹುಬ್ಬಳ್ಳಿ- ಅಂಕೋಲಾ ರೇಲ್ವೇ ಯೋಜನೆಯು ಇದರ ಸಮೀಪವೇ ನಡೆಯಲಿದೆ. ಅಂಕೋಲಾ – ಗುತ್ತಿ(ಆಂಧ್ರಪ್ರದೇಶ) ರಾಷ್ಟ್ರೀಯ ಹೆದ್ದಾರಿ 53 ಈ ಕಾಲನಿ ಸಮೀಪದಲ್ಲಿದೆ. ಖಾನಾಪುರ-ಹಳಿಯಾಳ-ಯಲ್ಲಾಪುರ-ಶಿರಸಿ – ಭಟ್ಕಳ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಚಾಲ್ತಿಯಲ್ಲಿದೆ. ಇಂತಹ ಸಮಗ್ರ ಸಂಪರ್ಕ ಹೊಂದಿರುವ ಮಾಗೋಡಿನ ಹವಾಮಾನ ಅತ್ಯುತ್ತಮವಾಗಿದೆ. ಇದು ಊಟಿ-ಕೊಡೈಕೆನಾಲ್-ಡೆಹ್ರಾಡೂನ್ ಗಳಂತಹ ಸುಂದರ ಪ್ರದೇಶವಾಗಿದೆ. ಸಮೃದ್ಧ ನೀರಿದೆ. ಸಾಂಸ್ಕೃತಿಕವಾಗಿ ಸಂಪನ್ನವಾದ ಊರುಗಳು ಆಸುಪಾಸಿನಲ್ಲಿವೆ. ಆದ್ದರಿಂದ ಈ ಮಾಗೋಡು ಪ್ರದೇಶವನ್ನು ವಿಶೇಷ ಆರ್ಥಿಕ ವಲಯ ಅಥವಾ ವಿಶೇಷ ಔದ್ಯೋಗಿಕ ವಲಯ ಎಂದು ಘೋಷಿಸುವ ಮೂಲಕ ನಮ್ಮ ಭಾಗದ ಪ್ರತಿಭಾವಂತ ಯುವ ಜನಾಂಗದ ಐಟಿ,ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನಿಗಳಾಗುವ ಕನಸನ್ನು ನನಸು ಮಾಡಬೇಕು ಎಂಬ ಕಳಕಳಿಯ ವಿನಂತಿ.
ಉತ್ತರ ಕನ್ನಡವು ಬೃಹತ್ ಯೋಜನೆಗಳಿಗೆ ಭಾರೀ ತ್ಯಾಗ ಮಾಡಿದ್ದಲ್ಲದೇ ಅಡಿಕೆ, ಮತ್ಸ್ಯೋದ್ಯಮದಿಂದ ಸಾವಿರಾರು ಕೋಟಿ ರೂ. ತೆರಿಗೆಯನ್ನು ನೀಡುತ್ತಿದೆ. ಯಾಲಕ್ಕಿ ಕಾಳುಮೆಣಸು, ಶುಂಠಿ ಮೊದಲಾದ ಸಾಂಬಾರ ಜೀನಸುಗಳಿಂದ ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ 500 ಕೋಟಿಗೂ ಮಿಕ್ಕ ರೂ.ಗಳಷ್ಟು ಆದಾಯವನ್ನು ಗಳಿಸಿಕೊಡುತ್ತಿದೆ.
ದುಃಖದಾಯಕ ಸಂಗತಿಯೆಂದರೆ ಅಪಾರ ತ್ಯಾಗಕ್ಕೆ ಪ್ರತಿಯಾಗಿ ಅದರ ಕಾಲಾಂಶವೂ ಉಭಯ ಸರ್ಕಾರಗಳಿಂದ ಉತ್ತರ ಕನ್ನಡಕ್ಕೆ ಅತ್ಯುತ್ತಮ ಮಲ್ಟಿ ಸ್ಪೆಶಲ್ ಆಸ್ಪತ್ರೆ,ವಿಶ್ವವಿದ್ಯಾನಿಲಯ,ಸಂಶೋಧನಾಲಯ ಮುಂತಾದ ಪರಿಸರ ಪೂರಕ ಕೈಗಾರಿಕೆಗಳ ರೂಪದಲ್ಲಿ ಪ್ರಾಪ್ತವಾಗಿಲ್ಲ.
ಆದ್ದರಿಂದ ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಇದೇ ಬೆಳಗಾವಿಯ ಅಧಿವೇಶನದಲ್ಲಿ ಮಾಗೋಡನ್ನು ವಿಶೇಷ ಆರ್ಥಿಕ ವಲಯ, ಅಥವಾ ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸುವ ನಿರ್ಣಯ ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ತ್ಯಾಗಕ್ಕೆ ಗೌರವ ನೀಡಬೇಕು. ರಾಜ್ಯದಲ್ಲಿ ಸದ್ಯೋ ಭವಿಷ್ಯದಲ್ಲಿ ನಡೆಯುವ ಅಂತರರಾಷ್ಟ್ರೀಯ ಟೆಕ್ ಸಮ್ಮಿಟ್ ನಲ್ಲಿ ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಸಾಫ್ಟ್ ವೇರ್ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಈ ಭಾಗದ ಯುವ ಜನಾಂಗದ ಕನಸು ನನಸಾಗಲು ಕಾರಣವಾಗಬೇಕು ಎಂಬುದಾಗಿ ಕೋರಿಕೊಳ್ಳುತ್ತೇವೆ.
ಇಂತಿ :ಉತ್ತರ ಕನ್ನಡ ಜಿಲ್ಲೆಯ ನಾಗರೀಕರು
