ಸುದ್ದಿ ಕನ್ನಡ ವಾರ್ತೆ

ಭಟ್ಕಳ: ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಡಿಸೆಂಬರ್ ೧೩ ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಬೃಹತ್ ಲೋಕ ಅದಾಲತ್ ಏರ್ಪಡಿಸಲಾಗಿದ್ದು, ಕಕ್ಷಿದಾರರು ಇದರ ಸದುಪಯೊಗ ಪಡೆಯುವಂತೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.

ಅವರು ನ್ಯಾಯಾಲಯದ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲೋಕ ಅದಾಲತ್‌ನಲ್ಲಿ ರಾಜೀಯಾಗಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದ್ದು ಕಕ್ಷಿದಾರರು, ನ್ಯಾಯವಾದಿಗಳ ಸಹಕಾರದಿಂದ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ನಲ್ಲಿ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಡಿಸೆಂಬರ್ ೧೩ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಮೂರೂ ನ್ಯಾಯಾಲಯಗಳ ಒಟ್ಟೂ ೨೧೧೬ ಪ್ರಕರಣಗಳನ್ನು ಗುರುತಿಸಲಾಗಿದೆ.

ಇನ್ನಷ್ಟು ಪ್ರಕರಣಗಳಿದ್ದಲ್ಲಿ ಕಕ್ಷಿದಾರರು ಕೂಡಾ ರಾಜಿಯಾಗತಕ್ಕ ಪ್ರಕರಣಗಳನ್ನು ತಮ್ಮ ವಕೀಲರ ಮೂಲಕ ಇಲ್ಲವೇ ನೇರವಾಗಿ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ನಲ್ಲಿ ತಂದು ರಾಜೀ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಪಕ್ಷಗಾರರಿಗೆ ಹೊರೆಯಾಗದಂತೆ ಎರಡೂ ಪಕ್ಷಗಾರರ ಒಪ್ಪಿಗೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಇಲ್ಲಿ ಪ್ರಕರಣ ಒಮ್ಮೆ ರಾಜೀಯಾಗಿ ಇತ್ಯರ್ಥವಾದರೆ ಅವುಗಳಿಗೆ ಅಪೀಲು ಕೂಡಾ ಇರುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ ಫೀ ಕೂಡಾ ವಾಪಾಸು ದೊರೆಯುವುದರಿಂದ ಕಕ್ಷಿದಾರರಿಗೆ ಹೊರೆಯಾಗುವದಿಲ್ಲ ಎಂದರು. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾಗುವುದರಿಂದ ಪರಸ್ಪರ ಪಕ್ಷಗಾರರಲ್ಲಿನ ಸ್ನೇಹ ಉಳಿಯುವುದರಿಂದ ಸಮಾಜದಲ್ಲಿ ಶಾಂತಿ, ಉತ್ತಮ ವಾತಾವರಣ ಮೂಡುತ್ತದೆ. ಲೋಕ ಅದಾಲತ್‌ನಲ್ಲಿ ಐ.ಪಿ.ಸಿ., ರಾಜೀಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಪ್ರಕರಣ, ವಾಂಟಣಿ ಪ್ರಕರಣ, ಜಮೀನು ಸ್ವಾಧೀನ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣ, ಮೊಟಾರು ವಾಹನ ಅಪಘಾತ ಪ್ರಕರಣ, ಜನನ ನೋಂದಣಿ ಪ್ರಕರಣ, ಸೇರಿದಂತೆ ಇನ್ನೂ ಅನೇಕ ಪ್ರಕರಣಗಳು ರಾಜೀಯಾಗಲಿದ್ದು, ಲೋಕ ಅದಾಲತ್ ಬಗ್ಗೆ ಪಕ್ಷಗಾರರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದರು.

ಈಗಾಗಲೇ ವಕೀಲರ ಸಂಘ, ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರನ್ನು ಕೋರಲಾಗಿದ್ದು ಉತ್ತಮ ಸಹಕಾರ ದೊರೆಯುವ ಭರವಸೆ ಇದೆ ಎಂದರು.
ಶೇ.೫೦ರ ರಿಯಾಯಿತಿ: ಟ್ರಾಫಿಕ್ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಕಟ್ಟುವವರಿಗೆ ಸರಕಾರ ಶೇ.೫೦ ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದು ಇದು ಡಿ.೧೨ರಂದು ಕೊನೆಗೊಳ್ಳಲಿದೆ. ಮೋಟಾರು ವಾಹನ ಕಾಯಿದೆಯಡಿಯಲ್ಲಿ ದಂಡ ಕಟ್ಟಲು ಬಾಕಿ ಇಟ್ಟುಕೊಂಡಿರುವರು ಡಿ.೧೨ರ ಒಳಗಾಗಿ ಭರಣ ಮಾಡಿ ಸರಕಾರ ಘೋಷಣೆ ಮಾಡಿದ ಶೇ.೫೦ರ ಲಾಭ ಪಡೆದುಕೊಳ್ಳುವಂತೆ ಅವರು ತಿಳಿಸಿದರು. ನವೆಂಬರ್ ೨೧ರಿಂದ ಆರಂಭವಾದ ರಿಯಾಯಿತಿ ಡಿಸೆಂಬರ್ ೧೨ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದ ಅವರು ಲೋಕ ಅದಾಲತ್ ಕಾರ್ಯಕ್ರಮ ಭಟ್ಕಳದ ಮೂರೂ ನ್ಯಾಯಾಲಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಹಿಂದೆ ನಡೆದ ಲೋಕ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ.

ಡಿಸೆಂಬರ್ ೧೩ ರಂದು ನಡೆಯುವ ಲೋಕಅದಾಲತ್‌ನ್ನೂ ಕೂಡ ಎಲ್ಲರೂ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.