ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಖೇತಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡ/ಅನಮೋಡದ ಯಮನಪ್ಪ ಕನಕಪ್ಪ ಹರಿಜನ(ನಾಟೇಕರ್) ಪದನ್ನೋತ ಮುಖ್ಯೋಪಾಧ್ಯಾಯರು ಇವರ ಸೇವಾ ನಿವೃತ್ತಿಯ ಮನಸ್ಪಂದನ ಹಾಗೂ ಬೀಳ್ಕೋಡುಗೆ ಸಮಾರಂಭ ದಿನಾಂಕ:30-11-2025 (ರವಿವಾರ)ರಂದು ಮಧ್ಯಾಹ್ನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅನಮೋಡದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಗಣ್ಯರನ್ನು ಆಹ್ವಾನಿಸಿಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ,ಪ್ರಾರ್ಥನೆಯನ್ನು ಹಾಡಲಾಯಿತು. ಕಾರ್ಯಕ್ರಮದ ವೇದಿಕೆಯ ಸಭಾ ಕಾರ್ಯಕ್ರಮವನ್ನು ಉಪಸ್ಥಿತರಿದ್ದ ಗಣ್ಯರು ನೆರವೇರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಮಾತನಾಡಿ ಪದನ್ನೋತ ಮುಖ್ಯೋಪಾಧ್ಯಾಯರಾದ ಯಮನಪ್ಪ ಸರ್ ರವರು ತಾಲೂಕಿನಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಶಿಕ್ಷಕರಲ್ಲಿ ಒಬ್ಬರು,ಇಂದು ಅವರು ಇಲಾಖೆಯ ನಿಯಾಮವಳಿ ಪ್ರಕಾರ ವಯೋ ನಿವೃತ್ತಿ ಹೊಂದುವುದು ಅನಿವಾರ್ಯ, ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯಿಂದ ಇತರ ಶಿಕ್ಷಕರಿಗೆ ಮಾದರಿಯಾಗಿದ್ದರು.

ಅವರ ಮುಂದಿನ ನಿವೃತ್ತಿಯ ಜೀವನ ಸುಖಕರವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ಹಾಗೂ ತಾಲೂಕಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳ,ಶಿಕ್ಷಕರ ಪರವಾಗಿ ಶುಭ ಹಾರೈಸಿದರು. ಅನಮೋಡ ಕ್ಲಸ್ಟರಿನ ಸಿ.ಆರ್.ಪಿ ಗಳಾದ ಬಿ.ಹೆಚ್.ಬಾಗವಾನ ಸರ್ ಮಾತನಾಡಿ ವಯೋ ನಿವೃತ್ತಿಯಾಗುತ್ತಿರುವ ಯಮನಪ್ಪ ನಾಟೇಕರ್ ಸರ್ ಅವರು ಇಲಾಖೆಯ ನಿಯಾಮವಳಿಯಂತೆ ನಿವೃತ್ತಿ ಅನಿವಾರ್ಯ,ಅನಮೋಡ ಭಾಗದಲ್ಲಿ ಯಾವುದೇ ಶೈಕ್ಷಣಿಕ ಕಾರ್ಯಕ್ರಮವಿರಲಿ ಇಲಾಖೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದರು.ಅವರ ವೃತ್ತಿಪರ ಕಾರ್ಯದಕ್ಷತೆ ನಮಗೆಲ್ಲಾ ಸದಾ ಪ್ರೇರಣಾದಾಯ,ಅವರ ಅನುಭವ,ಮಾರ್ಗದರ್ಶನ ನಿವೃತ್ತಿಯ ನಂತರವೂ ನಮಗೆಲ್ಲಾ ನಿರಂತರ ಇರಲಿ,ನಿವೃತ್ತಿಯ ನಂತರದ ಜೀವನವು ಸುಖಕರವಾಗಲಿ ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು,ಸದಸ್ಯರು, ಅಖೇತಿ ಗ್ರಾಮ ಪಂಚಾಯತದ ಜನಪ್ರತಿನಿಧಿಗಳು,ಊರ ಪ್ರಮುಖರು,ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ಯಮನಪ್ಪ ಕನಕಪ್ಪ ಹರಿಜನ (ನಾಟೇಕರ್)ಶಿಕ್ಷಕರ ನಿವೃತ್ತಿಯ ನಂತರದ ಜೀವನವು ಸುಖಕರವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಇಲಾಖೆ,ಶಾಲೆಯ,ಊರಿನ ಗ್ರಾಮಸ್ಥರ,ಶಿಕ್ಷಕರ ವತಿಯಿಂದ ನಿವೃತ್ತಿಯನ್ನು ಹೊಂದುತ್ತಿರುವ ಗೌಡಸಾಡ/ಅನಮೋಡ ಶಾಲೆಯ ಪದನ್ನೋತ ಮುಖ್ಯೋಪಾಧ್ಯಾಯರಾದ ಯಮನಪ್ಪ ಕನಕಪ್ಪ ಹರಿಜನ (ನಾಟೇಕರ್)ಸರ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಯಮನಪ್ಪ ಕನಕಪ್ಪ ಹರಿಜನ (ನಾಟೇಕರ್)ಮಾತನಾಡಿ ತನ್ನ ಶಿಕ್ಷಕ ವೃತ್ತಿಯ ಸೇವೆ ಆರಂಭಿಸಿದಾಗನಿಂದ ಇಲ್ಲಿಯವರೆಗೆ ಇಲಾಖೆಯ ಅಧಿಕಾರಿಗಳ,ಶಿಕ್ಷಕ ವೃಂದದವರ, ಸಮುದಾಯದವರ,ಪಾಲಕರ,ಪೋಷಕರ,ಗಣ್ಯರ,ಮಕ್ಕಳ ಸಹಕಾರವನ್ನು ಮರೆಯುವಂತಿಲ್ಲ ಎಂದು ಭಾವುಕರಾದರು.ವಿಶೇಷವಾಗಿ ಈ ಊರಿನ ಗ್ರಾಮಸ್ಥರ ಪ್ರೀತಿ, ವಿಶ್ವಾಸ,ಸಹಕಾರ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು ಎಂದು ಹೇಳಿದರು.

ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ನಿವೃತ್ತ ಶಿಕ್ಷಕರು, ಗ್ರಾಮಸ್ಥರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು, ಪೋಷಕರು,ಮಕ್ಕಳು ಭಾಗವಹಿಸಿದ್ದರು. ಶಾಲಾ ಎಸ್ ಡಿ ಎಮ್ ಸಿ ಯವರು,ಊರ ಗ್ರಾಮಸ್ಥರು,ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಶಾಲೆಯ ಸಹ ಶಿಕ್ಷಕಿಯರು ಕಾರ್ಯಕ್ರಮದ ಸ್ವಾಗತ, ನಿರೂಪಣೆ,ವಂದನಾರ್ಪಣೆ ನಡೆಸಿಕೊಟ್ಟರು.