ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಜೋಯಿಡಾ ನಂತರದ ಪ್ರಮುಖ ಕೇಂದ್ರ,ರಾಮನಗರ- ಸದಾಶಿವಗಡ ರಾಜ್ಯ ಹೆದ್ದಾರಿಯ ನಡುವೆ ಇರುವ,ಜೋಯಿಡಾ-ಅಣಶಿ-ಉಳವಿ ಮಾರ್ಗವಾಗಿ ಹೋಗುವ ಶಾಲಾ,ಕಾಲೇಜಿನ ವಿದ್ಯಾರ್ಥಿಗಳಿಗೆ,ಪ್ರಯಾಣಿಕರಿಗೆ ಕುಂಬಾರವಾಡಾದಲ್ಲಿ ಬಸ್ ತಂಗುದಾಣದ ಸೌಲಭ್ಯ ಇಲ್ಲದಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ.

ದಿನನಿತ್ಯ ಸಾರಿಗೆ ಬಸ್ಸಿನ ಮೂಲಕ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಟ ಮಾಡುತ್ತಿರುವ ಕಾರಣ ವ್ಯವಸ್ಥಿತ ಬಸ್ ತಂಗುದಾಣದ ಅವಶ್ಯಕತೆಯಿದೆ. ಮಳೆಗಾಲದಲ್ಲಂತು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಸದ್ಯ ಬಸ್ ತಂಗುದಾಣದ ಸೌಲಭ್ಯ ಇಲ್ಲದ ಕಾರಣ ಶಾಲಾ,ಕಾಲೇಜಿನ ವಿದ್ಯಾರ್ಥಿಗಳು,ಸಾರ್ವಜನಿಕರು ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳ ಶೆಡ್ ನಲ್ಲಿ,ಮರದ ನೆರಳಲ್ಲಿ ನಿಂತು ಸಾರಿಗೆ ಸಂಸ್ಥೆಯ ವಾಹನವನ್ನು ಕಾಯುವ ಅನಿವಾರ್ಯ ಪರಿಸ್ಥಿತಿ ಎಲ್ಲರದ್ದಾಗಿದೆ.ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮೊರೆ ಆಗಿದೆ.
