ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ). ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಗುಂದದ ಶಾಲೆಯಲ್ಲಿ ಸರ್ಕಾರದ ಸುತ್ತೋಲೆ ಅನ್ವಯ ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರ- ಶಿಕ್ಷಕರ ಮಹಾಸಭೆಯು ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿ ಅಶ್ವತ್ಥ ಗಾಂವಕರ ಪ್ರಾರ್ಥನೆಯ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ವಿದ್ಯಾ ನಾಯ್ಕ ಗಣ್ಯರ ಜೊತೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ಸ್ವಾಗತಿಸಿದರು. ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಓದಿಸಲಾಯಿತು.

ಮಕ್ಕಳ ದಿನಾಚರಣೆಯ ನಿಮಿತ್ತ ಗಣ್ಯರ ಉಪಸ್ಥಿತಿಯಲ್ಲಿ ಮಕ್ಕಳು ಪಂಡಿತ ಜವಹರಲಾಲ ನೆಹರುರವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ,ಪುಷ್ಪ ನಮನ ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠಾನಿಸಲಾಗಿರುವ ಕ್ರಮಗಳು,ಪೋಷಕರು,ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ನವೆಂಬರ 14 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರ-ಶಿಕ್ಷಕರ ಮಹಾಸಭೆಯನ್ನು ಆಯೋಜಿಸಿಲಾಗಿದೆ. ಕೇವಲ ವಿದ್ಯಾರ್ಥಿಗಳ ಅಂಕಗಳಿಕೆಯ ಬಗ್ಗೆ ಮಹತ್ವ ಕೊಡದೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣದಲ್ಲಿ ಶಾಲಾ ಪರಿಸರದಲ್ಲಿ ಗಾಳಿ,ಬೆಳಕು ಇರುವ ಉತ್ತಮ ಕೊಠಡಿಗಳು,ಸ್ವಚ್ಛತೆಯ ದೃಷ್ಟಿಯಿಂದ ಶೌಚಾಲಯಗಳು, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಮವಸ್ತ್ರ, ಪಠ್ಯಪುಸ್ತಕ,ಮಕ್ಕಳ ಸುರಕ್ಷತೆಯ ಬಗ್ಗೆ,ಹಾಜರಾತಿ, ವಿದ್ಯಾಭ್ಯಾಸದ ಪ್ರಗತಿ ಪರಿಶೀಲನೆ, ಚರ್ಚೆ,ಶಾಲೆಯ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ,ಒಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದೇ ಇದರ ಉದ್ದೇಶ, ಕೇವಲ ಒಂದು ದಿನದ ಮಹಾಸಭೆ ಆಗಿರದೇ ವರ್ಷದುದ್ದಕ್ಕೂ ಇದರ ಉತ್ಸಾಹ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳಿದರು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಶೋಕ ಗಾಂವಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಭಾರತಿ ಕುಟ್ಟಿಕರ,ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಲಕ್ಷ್ಮಣ ಬರ್ಸೇಕರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಣಶಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಾತನಾಡಿ ಗುಂದ ಶಾಲೆಯ ಪಾಲಕರು ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಶಾಲೆಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತೀರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ಪ್ರೋತ್ಸಾಹ,ಸಹಕಾರ ಇದೆ ರೀತಿ ಇರಲಿ ಎಂದು ಹೇಳಿದರು. ಪೋಷಕರ- ಶಿಕ್ಷಕರ ಮಹಾಸಭೆಯಲ್ಲಿ ಪೋಷಕರ ಹಾಗೂ ಜನಪ್ರತಿನಿಧಿಗಳ ಪರಿಚಾಯತ್ಮಕ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು.ನಂತರ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು,ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳು,LNB,FLN ಬಗ್ಗೆ,ಮಕ್ಕಳ ಶೈಕ್ಷಣಿಕ ಚಟುವಟಿಕೆಯಲ್ಲಿ ಪೋಷಕರ ಜವಾಬ್ದಾರಿ ಬಗ್ಗೆ,ಶಾಲೆಯಲ್ಲಿನ ಭೌತಿಕ ಸೌಲಭ್ಯಗಳ ಕುರಿತು,2026-27 ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಹೆಚ್ಚಳ,ಮಕ್ಕಳ ಹಕ್ಕುಗಳು,ಮಕ್ಕಳ ರಕ್ಷಣಾ ನೀತಿ,POCSO ಕಾಯ್ದೆ,RTI ಬಗ್ಗೆ ಮಾಹಿತಿ,ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಇನ್ನಿತರ ವಿಷಯಗಳು ಚರ್ಚೆಯಾದವು.ಈ ಬಗ್ಗೆ ಹೆಚ್ಚಿನ ಮಾಹಿತಿಯ ವಿವರವನ್ನು ಮುಖ್ಯ ಶಿಕ್ಷಕಿ ವಿದ್ಯಾ ನಾಯ್ಕ ನೀಡಿದರು.

ಶಾಲಾ ಎಸ್.ಡಿ.ಎಮ್.ಸಿ ಸಮಿತಿಯವರು,ಪಾಲಕರು,ಪೋಷಕರು, ಶಿಕ್ಷಕರು, ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.ಮಕ್ಕಳಿಗೂ ಸಹ ಅಕ್ಷರಗಳ ಸಹಾಯದಿಂದ ಹೆಸರು,ವಾಕ್ಯ ಜೋಡಣೆ,ಇನ್ನಿತರ ಸ್ಪರ್ಧೆಗಳು ನಡೆದವು. ಈ ಸಂದರ್ಭದಲ್ಲಿ ಶಾಲೆಗೆ ಶಾಲೆಯ ಸಮಸ್ತ ಪಾಲಕರು ಸೇರಿ ಪ್ರೀಂಟರ್, ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ,ಅಣಶಿ ಗ್ರಾಮ ಪಂಚಾಯತ ಕಾರ್ಯದರ್ಶಿ,ಲಕ್ಷ್ಮಣ ಬರ್ಸೇಕರ 25 ಕುರ್ಚಿಗಳನ್ನು, ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ನಾಯ್ಕ ಗ್ಯಾಸ್ ಒಲೆ,ಸಾಮಾಜಿಕ ಕಾರ್ಯಕರ್ತ ನರಸಿಂಹ ಭಾಗವತ ಟಿಪಾಯಿ, ಪಾಲಕರಾದ ಶಿವರಾಮ ಹಾಗೂ ಸುಚಿತ್ರಾ ಕುಟ್ಟಿಕರ ದಂಪತಿಗಳು12 ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.ನಂದಿಗದ್ದೆ ಗ್ರಾಮ ಪಂಚಾಯತ ವತಿಯಿಂದ ಶಾಲೆಗೆ ಕಸದ ಡಬ್ಬಿ,ಬಕೇಟನ್ನು ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ವಿತರಿಸಿದರು.

ಈ ಸಭೆಯು ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು. ಶಾಲಾ ಆಡಳಿತ ಮಂಡಳಿಯವರ, ಪಾಲಕರ, ಪೋಷಕರ ಸಹಯೋಗದಲ್ಲಿ ಶಿಕ್ಷಕರು ಎಲ್ಲರಿಗೂ ಉತ್ತಮ ಸಾವಯವ ಶುಚಿ,ರುಚಿ ಭೋಜನದ ವ್ಯವಸ್ಥೆ ಮಾಡಿಸಿದ್ಡರು. ಕೊನೆಯಲ್ಲಿ ಶಾಲೆಗೆ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳಿಗೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ವಿದ್ಯಾ ನಾಯ್ಕ ಧನ್ಯವಾದಗಳನ್ನು ಸಲ್ಲಿಸಿದರು.