ಸುದ್ದಿ ಕನ್ನಡ ವಾರ್ತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಏಳು ಪ್ರಮುಖ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಕೃತ ರಾಜ್ಯಪತ್ರ ಹೊರಡಿಸಿದೆ.
ದಾಂಡೇಲಿ, ಶಿರಸಿ ಹಾಗೂ ಕಾರವಾರ ನಗರಸಭೆಗಳ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರನ್ನು ನೇಮಿಸಲಾಗಿದೆ.
ಇನ್ನುಳಿದಂತೆ, ಅಂಕೋಲಾ ಪುರಸಭೆ ಹಾಗೂ ಕುಮಟಾ ಪುರಸಭೆಗಳೆರಡಕ್ಕೂ ಕುಮಟಾ ಉಪವಿಭಾಗಾಧಿಕಾರಿಗಳನ್ನು, ಭಟ್ಕಳ ಪುರಸಭೆಗೆ ಭಟ್ಕಳ ಉಪವಿಭಾಗಾಧಿಕಾರಿಗಳನ್ನು ಮತ್ತು ಹಳಿಯಾಳ ಪುರಸಭೆಗೆ ಕಾರವಾರ ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.
ನಗರಸಭೆ ಮತ್ತು ಪುರಸಭೆಗಳ ಚುನಾಯಿತ ಕೌನ್ಸಿಲ್ ಅವಧಿಯು ಮುಕ್ತಾಯವಾದ ಹಿನ್ನೆಲೆಯಲ್ಲಿ, ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-389 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ಈ ಆದೇಶ ಹೊರಡಿಸಿದೆ. ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಈ ಸ್ಥಳೀಯ ಸಂಸ್ಥೆಗಳ ದಿನನಿತ್ಯದ ಕಾರ್ಯನಿರ್ವಹಣೆ ಹಾಗೂ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
