ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಡ್ಸಗದ್ದೆ ಗ್ರಾಮದ ಸುಬ್ರಾಯ ದಾನಗೇರಿಯವರ ಮನೆಯಲ್ಲಿ ದಾಸ ಪರಂಪರೆಗೆ ವಿಶೇಷವಾದಂತಹ ಕಾರ್ತಿಕ ಮಾಸದ ಏಕಾದಶಿ ಶನಿವಾರದಂದು ಕೀರ್ತನಾ ಕಾರ್ಯಕ್ರಮ ಯಶಸ್ವಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಯಕ್ಷಭಿಮಾನಿಗಳಾದ ಸೀತಾರಾಮ ಹೆಗಡೆ ಗಡಕಲಮನೆ ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು. ಖ್ಯಾತ ಹರಿಕಿರ್ತನಾಕಾರರಾದ ಈಶ್ವರ ದಾನಿ ಕೊಪ್ಪೆಸರ ಇವರು ಭಕ್ತ ಕನಕದಾಸರ ಚರಿತ್ರೆ ಎನ್ನುವ ಕಥಾನಕವನ್ನು ಅತ್ಯದ್ಭುತವಾಗಿ ಪ್ರಸ್ತುತ ಪಡಿಸಿ,ನೆರೆದಿದ್ದ ಪ್ರೇಕ್ಷಕರನ್ನು ಕಿರ್ತನಾ ಲೋಕಕ್ಕೆ ಕರೆದೊಯ್ಯುವ ಮೂಲಕ,ಜನಮನಕ್ಕೆ ಆಧ್ಯಾತ್ಮಿಕ ಆನಂದವನ್ನು ಉಣಬಡಿಸಿದರು. ಉಮೇಶ ಪಾಟೀಲ ಧಾರವಾಡ ಕಿರ್ತನಾ ಕಾರ್ಯಕ್ರಮದಲ್ಲಿ ತಬಲಾ ಸಾಥ್ ನೀಡಿದರೆ,ರಾಮಚಂದ್ರ ಹೆಗಡೆ ಯಲ್ಲಾಪುರ ಹಾರ್ಮೊನೀಯಂ ಸಾಥ್ ಉತ್ತಮವಾಗಿ ನೀಡಿದರು. ಶ್ರೀವಾಣಿ ಸಂಸ್ಕ್ರತಿ ಸೇವಾ ಸಂಘಟನೆಯ ಮಾತೆಯರ ಸಹಕಾರ ಹಾಗೂ ಊರ ಹಿರಿಯರ ಪ್ರೋತ್ಸಾಹದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ಗುಂದ ಮಾತೃ ಮಂಡಳಿಯ ಅಧ್ಯಕ್ಷರಾದ ಸೀತಾ ದಾನಗೇರಿ ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ,ನಿರೂಪಿಸಿ ಸದ್ಭಾವನೆಯಿಂದ ಕೂಡಿದ ಸತ್ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ವಂದಿಸಿದರು. ಕಾರ್ಯಕ್ರಮದಲ್ಲಿ ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ.ಹೆಗಡೆ, ವೇದಮೂರ್ತಿ ಪ್ರಸನ್ನ ಭಟ್ಟ,ಜಿ.ಆರ್.ಭಟ್ಟ,ನಿವೃತ್ತ ಮುಖ್ಯ ಶಿಕ್ಷಕ ಜೆ.ವಿ.ಹೆಗಡೆ, ಮಾತೆಯರು,ಭಕ್ತ ವೃಂದದವರು ಉಪಸ್ಥಿತರಿದ್ದರು.