ಸುದ್ದಿ ಕನ್ನಡ ವಾರ್ತೆ
ಶಿರಸಿ: ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಬೆಳೆ ವಿಮಾ ಕಂಪನಿ ೧೯೫ ಗ್ರಾಮ ಪಂಚಾಯ್ತಿಗಳಲ್ಲಿ ಕೇವಲ ೪೬ ಪಂಚಾಯ್ತಿಗಳ ಫಲಾನುಭವಿ ರೈತರಿಗೆ ವಿಮಾ ಪರಿಹಾರ ಬಿಡುಗಡೆಗೊಳಿಸಿ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡಿದೆ. ಬಡ ರೈತರ ನಿರೀಕ್ಷೆ, ವಿಶ್ವಾಸ ಹುಸಿಗೊಳಿಸಿದ ವಿಮಾ ಕಂಪನಿಗೆ ದಂಡ ವಿಧಿಸಿ ಬ್ಲಾಕ್ ಲೀಸ್ಟಗೆ ಹಾಕಿ ಉತ್ತರ ಕನ್ನಡದ ವಿಮೆ ಕಟ್ಟಿದ ಬೆಳೆಗಾರರಿಗೆ ನ್ಯಾಯ ಕೊಡಬೇಕು ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ೧೯೫ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರು ತೋಟಗಾರಿಕಾ ಬೆಳೆಗಳಿಗ ಸಂಬಂಧಿಸಿ ಬೆಳೆ ವಿಮೆ ಪಾವತಿಸಿದ್ದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಈ ವಿಮಾ ಕಂತಿನ ಹಣ ಬಿಡುಗಡೆ ಆಗಬೇಕಿತ್ತು. ಅಂತೂ ಬುಧವಾರ ವಿಮಾ ಹಣ ಬಿಡುಗಡೆ ಆಗಿದ್ದು, ಕೇವಲ ೪೬ ಗ್ರಾಮ ಪಂಚಾಯ್ತಿಗಳ ರೈತರಿಗೆ ೧೦.೯೬ ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದು ವಿವರಿಸಿ, ಉಳಿದ ರೈತರಿಗೆ ಅನ್ಯಾಯ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅನೇಕ ಹೋರಾಟ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರ, ಶಾಸಕರ, ಸಂಸದರ ಒತ್ತಡ ಬೆಳೆ ವಿಮಾ ಪರಿಹಾರ ಬಿಡುಗಡೆಗೆ ಇತ್ತು. ಅತಿಯಾದ ಮಳೆಯಿಂದಲೂ ರೈತರು ಕಷ್ಟದಲ್ಲಿ ಇದ್ದರು. ರಾಜ್ಯ ಸರಕಾರದ ನಿರಂತರ ಪ್ರಯತ್ನದ ಬಳಿಕ ವಿಮಾ ಕಂಪನಿ ಕೇವಲ ೪೬ ಪಂಚಾಯ್ತಿಗೆ ಮಾತ್ರ ವಿಮೆ ಬಿಡುಗಡೆಗೊಳಿಸಿ ಉಳಿದ ಪಂಚಾಯ್ತಿಯ ರೈತರಿಗೆ, ತೋಟಗಾರಿಕಾ ಬೆಳೆಗಾರರಿಗೆ ಅನ್ಯಾಯ ಮಾಡಿದೆ ಎಂದು ಹೆಬ್ಬಾರ ಆಕ್ಷೇಪಿಸಿದ್ದಾರೆ.
ಈ ರೀತಿ ನಡೆದುಕೊಂಡ ವಿಮಾ ಕಂಪನಿಯ ಬಗ್ಗೆ ರೈತರ ವಿಶ್ವಾಸ ಕಳೆದು ಹೋಗುತ್ತದೆ. ರೈತರಿಗೆ ಏಕೆ ವಿಮೆ ಕಟ್ಟಬೇಕು ಎಂದೂ ಪ್ರಶ್ನೆ ಬರುತ್ತದೆ ಎಂದೂ ಆತಂಕಿಸಿದ ಅವರು,
ಕರ್ನಾಟಕ ಸರಕಾದ ಕೃಷಿ ಇಲಾಖೆ ಕಾರ್ಯದರ್ಶಿಗಳು ಕೇಂದ್ರ ಸರಕಾರದ ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಉತ್ತರ ಕನ್ನಡದ ವಿಮೆ ಕಟ್ಟಿದ ತೋಟಗಾರಿಕಾ ಬೆಳೆಗಾರರಿಗೆ ಅನ್ಯಾಯ ಆಗಿದ್ದನ್ನು ಪ್ರಸ್ತಾಪಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿವಮೊಗ್ಗದಲ್ಲಿ ಕೃಷಿ ಸಚಿವರ ಗಮನ ಸೆಳೆದ ಪ್ರಸ್ತಾಪವನ್ನೂ ಪತ್ರದಲ್ಲಿ ಕಾರ್ಯದರ್ಶಿಗಳು ಮಾಡಿದ್ದಾರೆ. ಕೇಂದ್ರ ಸರಕಾರವು ನ್ಯಾಯಯುತ ಪರಿಹಾರ ಕೊಡದ ವಿಮಾ ಕಂಪನಿ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಜಿಲ್ಲೆಯ ಬಡ ರೈತರಿಗೆ ಅನ್ಯಾಯ ಆಗುತ್ತದೆ ಎಂದು ಹೆಬ್ಬಾರ್ ಹೇಳಿದ್ದಾರೆ.
ಅಂಕೋಲಾದ ೨, ಹೊನ್ನಾವರದ ೧೦, ಕುಮಟಾದ ೧, ಶಿರಸಿಯ ೮, ಯಲ್ಲಾಪುರದ ೧, ಹಳಿಯಾಳದ ೧೯, ಮುಂಡಗೋಡದ ೧, ಸಿದ್ದಾಪುರ ಹಾಗೂ ಜೋಯಿಡಾದ ತಲಾ ೨ ಪಂಚಾಯತಗಳಿಗೆ ವಿಮೆ ಪರಿಹಾರ ಬಿಡುಗಡೆ ಆಗಿದೆ ಎಂದೂ ಹೆಬ್ಬಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.