ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಅಕ್ಟೋಬರ್ 31 ತಾಲೂಕಿನ ಖಾನಗಾಂವ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಆರನೇ ತಾಲೂಕು ಸಮ್ಮೇಳನವನ್ನು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯ ಶ್ಯಾಮನಾಥ ನಾಯಕರವರು ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಪ್ರೇಮಾನಂದ ವೇಳಿಪ ತಾಲೂಕಾ ಅಧ್ಯಕ್ಷರು ಕರ್ನಾಟಕ ಪ್ರಾಂತ ರೈತ ಸಂಘ ವಹಿಸಿದ್ದರು.
ಈ ಸಮ್ಮೇಳನದ ಮುಖ್ಯ ಉದ್ದೇಶ ಜೋಯಿಡಾ ತಾಲೂಕಿನ ಪ್ರತಿಯೊಂದು ಹಳ್ಳಿಯ ಸಮಗ್ರ ಅಭಿವೃದ್ಧಿ ಆಗುವುದು,ಹಳ್ಳಿಗಳ ರಸ್ತೆ, ಸೇತುವೆ, ಸಾರಿಗೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತಾಯ ವ್ಯಕ್ತವಾಯಿತು.
ಅದೇ ರೀತಿ, ಹುಲಿ ಯೋಜನೆಯಿಂದ ಗ್ರಾಮೀಣ ಜನತೆಗೆ ಉಂಟಾಗುತ್ತಿರುವ ತೊಂದರೆಗಳನ್ನು ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ರೈತ ನಾಯಕರು ಪುನರುಚ್ಚರಿಸಿದರು.
ಸಭೆಯಲ್ಲಿ ರೈತರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ಬೇಡಿಕೆಗಳು ಫಲಕಾರಿ ಆಗಬೇಕೆಂದು ಅಭಿಪ್ರಾಯ ವ್ಯಕ್ತವಾಯಿತು.
ಇಂದಿನ ಸಮ್ಮೇಳನದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು —
ನವೆಂಬರ 10 ರಂದು ಪಾದಯಾತ್ರೆ ಮುಖಾಂತರ ಜೋಯಿಡಾ ತಹಶೀಲ್ದಾರ ಕಚೇರಿಗೆ ತೆರಳಿ, ಬೇಡಿಕೆಗಳು ಈಡೇರಿಸುವವರೆಗೆ ನಿರಂತರ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಈ ಹೋರಾಟದಲ್ಲಿ ಪ್ರತಿಯೊಂದು ಮನೆಯವರೂ ಒಬ್ಬರಂತೆ ಭಾಗವಹಿಸುವುದು,ಭೋಜನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದು ಅಡುಗೆ–ಊಟದ ವ್ಯವಸ್ಥೆ ಮಾಡಿಕೊಂಡು ನಿರಂತರ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಮ್ಮೇಳನದಲ್ಲಿ ಸರ್ವ ಋತುರಸ್ತೆ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ,ದೂರಸಂಪರ್ಕ ನೆಟ್ವರ್ಕ್ ಟವರ್ ವ್ಯವಸ್ಥೆ, ಮತ್ತು ಹುಲಿ ಯೋಜನೆಯಿಂದ ಉಂಟಾಗುವ ಪ್ರಾಣಿ–ಮಾನವ ಸಂಘರ್ಷಕ್ಕೆ ಪರಿಹಾರ ನೀಡಬೇಕು ಎಂಬ ವಿಷಯಗಳ ಕುರಿತು ಗಂಭೀರವಾದ ಚರ್ಚೆ ನಡೆಯಿತು.
ಈ ಎಲ್ಲಾ ಬೇಡಿಕೆಗಳನ್ನು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಸಾಧಿಸಲು ನಿರ್ಧಾರ ಕೈಗೊಳ್ಳಲಾಗಿದೆ. ವೇದಿಕೆಯಲ್ಲಿ ಶಾಂತಾ ವೇಳಿಪ, ದಯಾನಂದ ನಾಯ್ಕ,ಚಂದ್ರು ಸಾವಂತ ಇದ್ದರು.ಕರಂಜೋಯಿಡಾ,ವಾಗೇಲಿ, ಮಾರ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಾಜೇಶ ಗಾವಡಾರವರು ಸ್ವಾಗತಿಸಿ,ನಿರೂಪಿಸಿ,ವಂದನೆಗಳನ್ನು ಸಲ್ಲಿಸಿದರು.

 
							 
			 
			 
			 
			 
		 
			 
			 
			 
			