ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಡಪೋಲಿ ಗ್ರಾಮದಲ್ಲಿ ಆಳತ್ತೇರ ಟವರ್ ನಿರ್ಮಾಣಗೊಂಡು ನಿಂತರೂ ಸಂಪರ್ಕ ಸೇವೆ ಏಕೆ ನೀಡಿಲ್ಲ ಎಂಬುದು ಇಲ್ಲಿನ ನಾಗರಿಕರ ಪ್ರಶ್ನೆ. ಸದ್ಯ ಜೋಯಿಡಾ ತಾಲೂಕು ಸೇರಿದಂತೆ ಇಡಿ ಜಿಲ್ಲೆಯಲ್ಲಿ ಸಾರ್ವಜನಿಕ ಹಾಗೂ ಮಾಧ್ಯಮ ದಲ್ಲಿ ಚರ್ಚೆಯಲ್ಲಿರುವ ಭಾರತ ಸರ್ಕಾರದ ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆ ಬಿ.ಎಸ್.ಎನ್.ಎಲ್ ಅಂದರೆ ತಪ್ಪಾಗಲಾರದು.

ಈಗಿನ ಮುಂದುವರೆದ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ, ಕ್ಷಣ ಮಾತ್ರದಲ್ಲಿ ಬಹಳಷ್ಟು ದೈನಂದಿನ ವ್ಯವಹಾರಗಳು ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆಯುತ್ತಿದ್ದು,ನಮ್ಮ ಗ್ರಾಮದ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಕಾರ್ಯ ಮುಗಿದು 4 ವರ್ಷಗಳಾಗುತ್ತಾ ಬಂದರೂ ಇಲ್ಲಿ ನ ಅಧಿಕಾರಿ ವರ್ಗದವರ ನಿರ್ಲಕ್ಷ್ಯವೂ,ಇನ್ನಾವ ಕಾರಣದಿಂದ ನಮಗೆ ಸಂಪರ್ಕ ಸೇವೆ ಕಲ್ಪಿಸುವ ಕೆಲಸ ಏಕೆ. ಆಗಲಿಲ್ಲ?ನಾವು ವಿಕಸಿತ ಭಾರತದ ಭಾಗವಾಗಿ ಮುಂದುವರೆಯುವುದು ಬೇಡವೇ ಎಂಬುದು ಇಲ್ಲಿಯ ಪ್ರಜ್ಞಾವಂತ ನಾಗರಿಕರ,ಯುವಕರ ಆಡಳಿತ ವ್ಯವಸ್ಥೆಗೆ ಪ್ರಶ್ನೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಕ್ಷೇತ್ರಗಳಲ್ಲಿನ ವ್ಯವಹಾರ,ಮಾಹಿತಿ ವಿನಿಮಯಕ್ಕೆ ದೂರಸಂಪರ್ಕ ವ್ಯವಸ್ಥೆ ಎಷ್ಟರ ಮಟ್ಟಿಗೆ ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಗ್ರಾಮ ಬಾಡಪೋಲಿಯಿಂದ ಅಣಶಿ ಗ್ರಾಮ ಪಂಚಾಯತ ಕೇಂದ್ರಕ್ಕೆ ಸುಮಾರು 3-4 ಕಿ.ಮೀ ಅಂತರವಿರುತ್ತಿದ್ದು,ಹಾಳಾದ ಹೆದ್ದಾರಿ ರಸ್ತೆ,ಸಮಯಕ್ಕೆ ಸರಿಯಾದ ವಾಹನ ಸಂಚಾರವಿಲ್ಲ, ಎಲ್ಲಾ ಸಮಸ್ಯೆಗಳ ನಡುವೆಯೂ ದೂರಸಂಪರ್ಕಕ್ಕೆ ಸಂಬಂಧಿಸಿದ ಕೆಲಸಗಳಿದ್ದರೆ ಅಣಶಿ ಟವರ್ ಸೇವೆಯಲ್ಲಿ ಮಾಡಿಕೊಳ್ಳುವುದು ದಿನನಿತ್ಯದ ಗೋಳಾಟವಾಗಿದೆ ಎಂದು ಇಲ್ಲಿನ ಹಿರಿಯರು, ಯುವಕರು,ಶಾಲಾ,ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಅಣಶಿ ಬಿ.ಎಸ್.ಎನ್.ಎಲ್ ಟವರ್ ನ್ನು 4 ಜಿ ಗೆ ಅಪಗ್ರೇಡ ಮಾಡುವಂತೆ ಇಲ್ಲಿನ ಗ್ರಾಹಕರು ಆಗ್ರಹಿಸಿದ್ದ ನೆನಪು ಇರುವಾಗಲೇ ಈಗ ಅದೇ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಡಪೋಲಿ ಗ್ರಾಮದ ಸಾರ್ವಜನಿಕರು ದೂರಸಂಪರ್ಕ ನೀಡುವಂತೆ ಆಗ್ರಹಿಸುವುದನ್ನು ನೋಡಿದರೆ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬ ಮಾತು ಈಗಿನ ಆಡಳಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ.ಇನ್ನಾದರೂ ಮಾಧ್ಯಮದ ವರದಿಗೆ ಆಡಳಿತ ವ್ಯವಸ್ಥೆಯವರು ಎಚ್ಚೆತ್ತುಕೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ.