ಸುದ್ದಿ ಕನ್ನಡ ವಾರ್ತೆ

. ಅಂಕೋಲಾ:ತಾಲೂಕಿನ ಹಳವಳ್ಳಿಯಲ್ಲಿ ಕಲಾಶ್ರೀ ಸಾಂಸ್ಕೃತಿಕ ಸಂಘ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯ ದಲ್ಲಿ ದೀಪಾವಳಿ ಪ್ರಯುಕ್ತ ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ನಾದಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಪ್ರಸಿದ್ಧ ಕಲಾವಿದ ಹಾಗೂ ಪ್ರಸಾಧನಕಾರ ಹರಿಹರ ಭಟ್ಟ ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವುದು ಸಂಘಟಕರ ಉದ್ದೇಶವಾಗಿದ್ದು,ಪ್ರತಿ ವರ್ಷವೂ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಪ್ರಾರ್ಥನೆಗೆ ಹಿತಾ ವಿನಯ ಹೆಗಡೆ ಮತ್ತು ಆರಾಧ್ಯ ಗಣೇಶ ಭಟ್ಟ ಭಾಗವಹಿಸಿದ್ದರು,ಅವರಿಗೆ ಅನಘಾ ಭಟ್ಟ ತಬಲಾ ಸಾಥ್ ನೀಡಿದರು. ನಂತರ ಹಾವೇರಿಯ ಪ್ರಸಿದ್ಧ ಶಹನಾಯಿ ಕಲಾವಿದ ಸತೀಶ ಭಜಂತ್ರಿ ಅವರ ಶಹನಾಯಿ ವಾದನ ಕಾರ್ಯಕ್ರಮ ನೆರೆದವರ ಮನಸೆಳೆಯಿತು.ತದನಂತರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದ ಸ್ಥಳೀಯ ಕಲಾವಿದ ಹರೀಶ ಹೆಗಡೆಯವರ ಗಾಯನ ಕಾರ್ಯಕ್ರಮ ನಡೆಯಿತು.ಅವರ ಸಂಗೀತ ರಸಧಾರೆಯು ಪ್ರೇಕ್ಷಕರ ಮನಸ್ಸು ತಣಿಸಿತು. ಹಿರಿಯ ಸಂಗೀತ ಕಲಾವಿದ ಪ್ರಕಾಶ ಹೆಗಡೆ(ಯಡಳ್ಳಿ) ಹಾರ್ಮೊನೀಯಂ ಸಾಥ್ ನೀಡಿದರು,ಯುವ ಪ್ರತಿಭೆ ಪ್ರದೀಪ ಕೋಟೆಮನೆ ತಬಲಾ ವಾದನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.