ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಮಾಜಾಳಿಯ ದಾಂಡೇಭಾಗ ಪ್ರದೇಶದಲ್ಲಿನ ಸಮುದ್ರದಲ್ಲಿ ಮೀನುಗಾರನು ಮೀನು ಹಿಡಿಯುವ ವೇಳೆ ನೀರಿನಿಂದ ಮೀನೊಂದು ಹಾರಿ ತನ್ನ ಚೂಪಾದ ಮೂತಿಯಿಂದ ಮೀನುಗಾರನ ಹೊಟ್ಟೆಗೆ ಚುಚ್ಚಿದ ಪರಿಣಾಮ ಸಾವನ್ನಪ್ಪಿದ್ದಾನೆ.

ಸಾವನ್ನಪ್ಪಿದ ಮೀನುಗಾರ ಅಕ್ಷಯ ಅನಿಲ ಮಾಜಾಳಿಕರ(24)ಎಂದು ಗುರುತಿಸಲಾಗಿದೆ. ಮಂಗಳವಾರ ಅಕ್ಷಯ ತನ್ನ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಕಾಂಡೆ (ತೊಳೆ)ಮೀನು ನೀರಿನಿಂದ ಹಾರಿ ಆತನ ಹೊಟ್ಟೆಯ ಭಾಗಕ್ಕೆ ಮೂತಿಯಿಂದ ಚುಚ್ಚಿ ಗಾಯ ಮಾಡಿದೆ. ಇದರಿಂದ ಮೀನುಗಾರನ ಕರುಳಿನ ಭಾಗದಲ್ಲಿ ಗಾಯವಾದ ಕಾರಣ ತಕ್ಷಣ ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜು ಕ್ರೀಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಎರಡು ದಿನಗಳ ಚಿಕಿತ್ಸೆಯನ್ನು ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು.

ಆದರೆ ಹೊಟ್ಟೆಯ ನೋವು ನಿಲ್ಲದ ಕಾರಣ ಮತ್ತೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಗುರುವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಅಕ್ಷಯ ಸಾವನ್ನಪ್ಪಿರುತ್ತಾನೆ. ವಿಷಯ ತಿಳಿದ ತಕ್ಷಣ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾದ ಸತೀಶ ಸೈಲ್ ಹಾಗೂ ವಿಧಾನ ಪರಿಷತ ಸದಸ್ಯರಾದ ಗಣಪತಿ ಉಳ್ವೇಕರ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.ಈ ದುರ್ಘಟನೆ ಸ್ಥಳೀಯ ಮೀನುಗಾರ ಸಮುದಾಯದಲ್ಲಿ ತೀವ್ರ ಆಘಾತ ಉಂಟು ಮಾಡಿದೆ.