ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ಪಟ್ಟಣದ ಗಾಂಧಿ ಕುಟಿರದಲ್ಲಿ ಅಕ್ಟೋಬರ 31ರಿಂದ ನವೆಂಬರ 4 ರ ವರೆಗೆ ಸ್ವಾಮೀಜಿಗಳ ಸಾನಿಧ್ಯದಲ್ಲಿ ಐದು ದಿನಗಳ ಕಾಲ ಜಿಲ್ಲೆಯ ಸಾಂಸ್ಕೃತಿಕ ಹಬ್ಬ ಸಂಕಲ್ಪ ಉತ್ಸವ ನಡೆಯಲಿದೆ.

ಅಕ್ಟೋಬರ 31 ರ ಸಂಕಲ್ಪ ಉತ್ಸವದ ಮೊದಲ ದಿನ ಸ್ವರ್ಣವಲ್ಲೀ ಶ್ರೀಗಳು ಉತ್ಸವದ ವೇದಿಕೆಗೆ ಸಂಜೆ 5:30 ಕ್ಕೆ ಬರಲಿದ್ದಾರೆ,ಅವರ ಜೊತೆ ಎಡನೀರು ಶ್ರೀಗಳು ಸೇರಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನಂತರದ ದಿನಗಳಲ್ಲಿ ಶಿರಳಗಿ ಬ್ರಹ್ಮಾನಂದ ಭಾರತಿ ಶ್ರೀಗಳು,ಬಾರ್ಕೂರು ಶ್ರೀಗಳು,ನೆಲೆಮಾವು ಶ್ರೀಗಳು ಹಾಗೂ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ತಾಳ ಮದ್ದಲೆ,ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮದ ಜೊತೆ ಐದು ಸ್ವಾಮೀಜಿಗಳ ಸಾನಿಧ್ಯ ಈ ಬಾರಿಯ ವಿಶೇಷತೆ. ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆ ಕಳೆದ 38 ವರ್ಷಗಳಿಂದ ಸಂಕಲ್ಪ ಉತ್ಸವ ನಡೆಸುತ್ತಿದೆ.39 ನೇಯ ಸಂಕಲ್ಪ ಉತ್ಸವ ಅಕ್ಟೋಬರ 31 ರಿಂದ ನವೆಂಬರ 4 ರ ವರೆಗೆ ಪಟ್ಟಣದ ಗಾಂಧಿ ಕುಟಿರ ದಲ್ಲಿ ನಡೆಯಲಿದೆ.ರಾಜ್ಯದಲ್ಲಿ ನಿರಂತರವಾಗಿ ಸಾಂಸ್ಕೃತಿಕ ತೇರನ್ನೆಳೆಯುತ್ತಿರುವ ಕೆಲವೇ ಸಂಸ್ಥೆಗಳಲ್ಲಿ ಸಂಕಲ್ಪವೂ ಒಂದಾಗಿದೆ.ಕನ್ನಡ ಜೀವನ ಹಬ್ಬ ಸಂಸ್ಕೃತಿಯ ಸುಗ್ಗಿ ಇದಾಗಿದ್ದು ,ನಾಡಿನ ನೂರಾರು ಕಲಾವಿದರನ್ನು ಬೆಳೆಸಿದ ಹೆಗ್ಗಳಿಕೆ ಹೊಂದಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.

ಯಕ್ಷಗಾನ,ತಾಳಮದ್ದಲೆ,ಭರತನಾಟ್ಯ,ಸಂಗೀತ,ನಾಟಕ ಕೀರ್ತನೆ,ಗಮಕ ವಾಚನ,ಭಜನೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಲಿವೆ, ತಮ್ಮ ಪುತ್ರರಾದ ಪ್ರಶಾಂತ ಹೆಗಡೆ ಮತ್ತು ಪ್ರಸಾದ ಹೆಗಡೆ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ಹೇಳಿದರು. ಸಂಸ್ಥೆಯ ಸಂಚಾಲಕರಾದ ಪ್ರಸಾದ ಹೆಗಡೆ ಮಾತನಾಡಿ ವಿವಿಧ ಕ್ಷೇತ್ರದ ಸಾಧಕರಾದ ಬಿ ಎನ್ ವಾಸರೆ, ರಾಮನಾಥ ಭಟ್ಟ,ಯಮುನಾ ನಾಯ್ಕ, ಕಲ್ಲಪ್ಪ ನಾಯ್ಕ,ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರಮನೆ,ಚಿದಾನಂದ ಹರಿಜನ ಡಾ:ನಾರಾಯಣ ಹುಳ್ಸೆ ಅವರಿಗೆ ಈ ಬಾರಿಯ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಸದಸ್ಯರಾದ ಸಿ.ಜೆ.ಹೆಗಡೆಯವರು ಪ್ರತಿದಿನ ಸುಬ್ರಹ್ಮಣ್ಯ ಚಿಟ್ಟಾಣಿಯವರ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಬಬ್ರುವಾಹನ, ಗದಾಯುದ್ಧ, ಕಾಳಿದಾಸ,ದ್ರೌಪದಿ ಪ್ರತಾಪ, ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿಯನ್ನು ನೀಡಿದರು. ಸಂಸ್ಥೆಯ ಸದಸ್ಯ ಬಾಬು ಬಾಂದೇಕರ ಇದ್ದರು.