ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಜನರ ಮುಖ್ಯವಾಗಿ ಅಂಗನವಾಡಿ,ಶಾಲೆ, ದೇವಸ್ಥಾನದ ಸಂಪರ್ಕದ ಕೊಂಡಿಯಾಗಿರುವ ಹಾಗೂ ಗ್ರಾಮದ ಕೇಂದ್ರ ಸ್ಥಾನದಲ್ಲಿರುವ, ನಂದಿಗದ್ದೆ ಪಂಚಾಯತ ವ್ಯಾಪ್ತಿಯ ಬ್ಯಾಂಕ್,ಅಂಚೆಕಚೇರಿ, ಸಹಕಾರಿ ಸಂಘದ ಕಚೇರಿಗಳಿಗೆ,ಪಡಿತರ ಸಾಮಾನುಗಳನ್ನು ತರಲು,ಗ್ರಾಮ ಪಂಚಾಯತ ಕಚೇರಿಗಳಿಗೆ ಸಂಬಂಧಿಸಿದ ಕೆಲಸಗಳಿದ್ದರೆ ಸದರಿ ರಸ್ತೆಯು ಮುಖ್ಯ ರಸ್ತೆಯಾಗಿದೆ.
ದಾಂಡೇಲಿ – ಫೋಟೋಲಿ- ಅವುರ್ಲಿ ಒಳ ಮಾರ್ಗದಲ್ಲಿ ಸಿಲಿಂಡರ್ ಗ್ಯಾಸ್,ಶಾಲೆಯ ರೇಶನ್ ,ಇನ್ನಿತರ ಸಾಮಗ್ರಿಗಳನ್ನು ಸರಬರಾಜು ಮಾಡಲು ಬರುವವರಿಗೆ ಬೈಪಾಸ್ ರಸ್ತೆಯಾಗಿದೆ. ಅವುರ್ಲಿ – ದಾಬೇ ರಸ್ತೆಯ ಉದ್ದ ಅಂದಾಜು 2.200ಕೀ ಮೀ ಇರುತ್ತಿದ್ದು,ಸದರಿ ರಸ್ತೆಯ 1.200ಕಿ.ಮೀ ರಸ್ತೆಯನ್ನು 2023ರಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಸದರಿ ರಸ್ತೆಯನ್ನು ನಬಾರ್ಡ್ ನ ಸಹಯೋಗದಲ್ಲಿ ಅಂದಾಜು ಮೊತ್ತ 72 ಲಕ್ಷ ಕಾಮಗಾರಿ ಮಾಡಿ ಅಭಿವೃದ್ಧಿ ಪರ ಶಾಸಕರು ಕಳೆದ ವರ್ಷ ಉದ್ಘಾಟನೆ ಮಾಡಿದ್ದರು.
ಇನ್ನು ಉಳಿದಿರುವ 1ಕೀ. ಮೀ ಖಡೀಕರಣ ರಸ್ತೆಯಲ್ಲಿ ಮಳೆಗಾಲದ ಸಮಯದಲ್ಲಿ ಕೆಸರು ಗದ್ದೆಯ ರೀತಿಯಲ್ಲಿ ರಾಡಿ ಆಗುವುದರಿಂದ ವಾಹನ ಸವಾರರಿಗೆ ಸಂಚಾರ ಮಾಡುವುದು ಕಷ್ಟವಾಗುತ್ತದೆ. ಕೆಸರಿನಲ್ಲಿ ಜಾರಿ ಬಿದ್ದು ಕೊಂಡು ಪೆಟ್ಟು ಬಿದ್ದಿದ್ದು ಇರುತ್ತದೆ. ಎಲ್ಲಾ ಚಟುವಟಿಕೆಗಳ ದೃಷ್ಟಿಯಿಂದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಉಳಿದ ಖಡೀಕರಣ ರಸ್ತೆಯನ್ನು ಸಂಬಂಧಿಸಿದ ಆಡಳಿತ ವ್ಯವಸ್ಥೆಯವರು ಗ್ರಾಮಸ್ಥರ, ಶಾಲಾ ಮಕ್ಕಳ,ವಾಹನ ಸವಾರರ,ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಗಮನ ಹರಿಸಿ ಪಕ್ಕಾ ರಸ್ತೆಯನ್ನಾಗಿ ಮಾಡಬೇಕೆಂದು ಮಾಧ್ಯಮದ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.