ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಗಣೇಶ ಹಬ್ಬದ 11ನೇ ದಿನವಾದ ಶನಿವಾರರಂದು ತಾಲೂಕಿನ ವಿವಿದೆಡೆಯಲ್ಲಿ ಪ್ರತಿಷ್ಠಾಪಿಸಿದ ವಿವಿಧ ಮಾದರಿಯ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಅದ್ದೂರಿಯಾಗಿ ಸಾಮೂಹಿಕ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ತಾಲೂಕಿನ ರಾಮನಗರದ ಕೇಂದ್ರ ಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮತ್ತು ಜೋಯಿಡಾದ ಬಸ್ ನಿಲ್ದಾಣದ ಹತ್ತಿರ ಜೈ ಮಲ್ಹಾರ ಫ್ರೆಂಡ್ಸ್ ಕ್ಲಬ್ ವತಿಯಿಂದ,ಕುಂಬಾರವಾಡಾದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಶ್ರದ್ಧಾ ಭಕ್ತಿಯೊಂದಿಗೆ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು. ಶನಿವಾರ ಸಂಜೆಯಿಂದ ಪ್ರಾರಂಭವಾದ ಮೆರವಣಿಗೆ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತ್ತು. ಮೆರವಣಿಗೆ ಸಮಯದಲ್ಲಿ ಭಜನೆ, ಪುಗುಡಿ ನೃತ್ಯ, ಗುಮಟೆ ಪಾಂಗ್,ಭಕ್ತರಿಂದ ಗಣಪತಿ ಬಪ್ಪಾ ಮೊರಯಾ ಎಂಬ ಘೋಷಣೆ,ಸಿಡಿ ಮದ್ದುಗಳ ಬಾನಿನಲ್ಲಿ ಚಿತ್ತಾರ, ಶ್ರೀ ಗಣೇಶ ಮೂರ್ತಿಯು ವಿಸರ್ಜನಾ ಸ್ಥಳಕ್ಕೆ ಹೋಗುವ ದಾರಿಯ ಮನೆಗಳ ಮುಂದೆ ಹಾದು ಹೋಗುವಾಗ ಕುಟಂಬದ ಸದಸ್ಯರೆಲ್ಲಾ ಸೇರಿ ಶ್ರೀಗಣೇಶ ಮೂರ್ತಿಗೆ ಆರತಿ ಎತ್ತಿ, ಪುಷ್ಪಾರ್ಚನೆ ಮೂಲಕ ಶ್ರೀ ದೇವರ ಈ ವರ್ಷದ ದರ್ಶನ ಆಶೀರ್ವಾದ ಪಡೆದು ಪುನೀತರಾದರು. ಈ ಎಲ್ಲಾ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರಲ್ಲದೇ ವಿವಿಧ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸಾರ್ವಜನಿಕ ಗಣೇಶೋತ್ಸವದಲ್ಲಿ ಧಾರ್ಮಿಕ,ಸಾಂಸ್ಕೃತಿಕ,ಹರಿಕೀರ್ತನೆ ಕಾರ್ಯಕ್ರಮಗಳು ಭಜನಾ,ತಿಂಡಿಗಳ ತಯಾರಿ,ನೃತ್ಯಗಳ, ಗುಮಟೆ ಪಾಂಗ್,ಆರತಿ ಹಾಡುವುದು,ಆಟೋಟಗಳ ಸ್ಪರ್ಧೆಗಳು, ರಸಮಂಜರಿ ಕಾರ್ಯಕ್ರಮ, ಅನ್ನ ಸಂತರ್ಪಣೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.