ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ನಗರದ ಮರಾಠಾ ಸಮಾಜ ಭವನದಲ್ಲಿ ಭಾನುವಾರ ಸಂಜೆ ಸರ್ವ ಮರಾಠಿ ಭಾಷಿಕ ಸಮಾಜ ಹಾಗೂ ಇನ್ನರ್ ವ್ಹೀಲ್ ಕ್ಲಬ್ ದಾಂಡೇಲಿ ಸಂಯುಕ್ತಾಶ್ರಯದಲ್ಲಿ “ಜೇಷ್ಠ ನಾಗರಿಕ ಸನ್ಮಾನ” ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಸರ್ವ ಮರಾಠಿ ಭಾಷಿಕ ಸಮಾಜ ಸಂಘಟನೆಯ ಅಧ್ಯಕ್ಷರಾದ ಪ್ರಕಾಶ ಬೇಟಕರ್ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಂಘಟನೆಯ ಉದ್ದೇಶ ಹಾಗೂ ಕಾರ್ಯವ್ಯಾಪ್ತಿಯ ಬಗ್ಗೆ ತಿಳಿಸಿದರು. ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜಾದವ ಉಪಾಧ್ಯಕ್ಷೆ ರೇಖಾ ಹೆಗಡೆ, ಪಿ ಎಸ್ ಐ ಕಿರಣ ಪಾಟೀಲ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷೆ, ದೀಪಾಲಿ ಸಾಮಂತ ಹಾಗೂ ಹಿರಿಯ ನಾಗರಿಕರಾದ ಗಜಾನನ ಧುಮೆ, ಗುರುದತ್ತ ಮಿರಾಶಿಯವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪಿ ಎಸ್ ಐ ಕಿರಣ ಪಾಟೀಲರವರು ಸೈಬರ್ ಸೆಕ್ಯೂರಿಟಿಯ ಬಗ್ಗೆ ಮಾಹಿತಿ ನೀಡುತ್ತ ಇತ್ತೀಚೆಗೆ ಆಗುತ್ತಿರುವ ಆನ್ಲೈನ್ ವಂಚನೆ ಹಾಗೂ ಅದರಿಂದ ಪಾರಾಗುವುದು ಹೇಗೆ ಎಂಬ ಬಗ್ಗೆ ಮಾತನಾಡಿ ಮನದಟ್ಟು ಮಾಡಿದರು. ತದನಂತರ ದೀಪಾಲಿ ಸಾಮಂತರವರು ದೇಹದಾನ, ಅಂಗಾಂಗದಾನ ಹಾಗೂ ನೇತ್ರದಾನದ ಬಗ್ಗೆ ಮಾತನಾಡಿ ದೇಹಾಂಗದಾನ ಮಾಡುವ ಪ್ರಕ್ರಿಯೆ ಹಾಗೂ ಪ್ರತಿಜ್ಞೆಯನ್ನು ಕೈಗೊಳ್ಳುವ ವಿಧಾನ, ಸಂಪೂರ್ಣ ಮಾಹಿತಿಯನ್ನು ಒದಗಿಸಿ ಮರಣದ ನಂತರ ಸುಟ್ಟು ಹೋಗುವ ಅಥವಾ ಮಣ್ಣಿನಲ್ಲಿ ಮಣ್ಣಾಗುವ ಬದಲು ಅಂಧರಿಗೆ, ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವರಗೆ , ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳಿಗೆ ಸಂಶೋಧನೆ ಹಾಗೂ ಜ್ಞಾನಾರ್ಜನೆಗೆ ಸಹಕಾರಿಯಾಗಲು ದೇಹ, ಅಂಗಾಂಗ ಮತ್ತು ಕಣ್ಣುಗಳನ್ನು ದಾನ ಮಾಡಿ ಅಮರರಾಗಿ ಎಂದು ಕರೆಕೊಟ್ಟರು.
ನಂತರ ಎಪ್ಪತ್ತು ವರ್ಷ ಮೇಲ್ಪಟ್ಟ ಐವತ್ತಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸಂಸ್ಥೆಯ ವತಿಯಿಂದ ಶಾಲು, ಸ್ಮರಣಿಕೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ನ ವತಿಯಿಂದ ಬ್ಯಾಗ್ ವಿತರಿಸಿ ಸನ್ಮಾನಿಸಲಾಯಿತು. ಸದಸ್ಯರಾದ ದೀಪಕ ಸಾಮಂತರವರು ಜೇಷ್ಠ ನಾಗರಿಕರ ಸನ್ಮಾನ ಮಾಡುವ ಮೂಲಕ ಇವರು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಿ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಕಾರ್ಯ ಇದಾಗಿದೆ ಎಂದರು.
ವರ್ಷಾ ಪರಾಂಜಪೆಯವರು ಪ್ರಾರ್ಥಸಿ
ಸಂತೋಷ ಧುರಿ ಹಾಗೂ ಪ್ರಿಯಲ್ ಬೇಟಕರರವರು ನಿರೂಪಿಸಿ ವಂದಿಸಿದರು. ಸರ್ವ ಮರಾಠಿ ಭಾಷಿಕ ಸಮಾಜದ ಎಲ್ಲ ಸದಸ್ಯರು ಹಾಗೂ ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯರು ಸಹಕರಿಸಿದರು.
