ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಅಸಲಿ ಬಂಗಾರವೆಂದು ನಂಬಿಸಿ ಸುಮಾರು 1 ಕೆ.ಜಿ. ತೂಕದ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ 10 ಲಕ್ಷ ರೂಪಾಯಿ ವಂಚಿಸಿದ್ದ ಅಂತರ ಜಿಲ್ಲಾ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮುದ್ದೇಶನಹಳ್ಳಿ ನಿವಾಸಿ ಗಜೇಂದ್ರ ಹಾಲೇಶಪ್ಪ ಕೊರಚರ (34) ಬಂಧಿತ ಆರೋಪಿ. ಆರೋಪಿತನು ಫಿರ್ಯಾದಿದಾರರಿಗೆ ಅಸಲಿ ಬಂಗಾರ ಕೊಡಿಸುವುದಾಗಿ ನಂಬಿಸಿ, ಬದಲಿಗೆ 1 ಕೆ.ಜಿ. ತೂಕದ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಅವರಿಂದ 10 ಲಕ್ಷ ರೂಪಾಯಿ ನಗದು ಪಡೆದು ವಂಚಿಸಿದ್ದನು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಬನವಾಸಿ. ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಶಿಕಾರಿಪುರ ಹಾಗೂ ಶಿರಾಳಕೊಪ್ಪ ಭಾಗಗಳಲ್ಲಿ ಖಚಿತ ಮಾಹಿತಿ ಹಾಗೂ ತಾಂತ್ರಿಕ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಸೆರೆಹಿಡಿದರು.

ಬಂಧಿತನಿಂದ ವಂಚನೆ ಮಾಡಿ ಸಂಗ್ರಹಿಸಿದ್ದ 10 ಲಕ್ಷ ರೂಪಾಯಿ ನಗದು ಹಣ, ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ಹಾಗೂ ಒಂದು ಮೊಬೈಲ್ ಸೆಟ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ, ಪಿಎಸ್‌ಐ ಶಾಂತಿನಾಥ ಪಾಸಾನೆ ಹಾಗೂ ಸಿಬ್ಬಂದಿಗಳಾದ ರಮೇಶ ಕೂಡಲ, ಚೇತನಕುಮಾರ, ಸಂತೋಷ ತಳವಾರ, ಮೋಹನ ಗಾವಡಿ, ಮಣಿಕಂಠ, ಪ್ರಶಾಂತ, ರೋಹಿತ ಮತ್ತು ಗಿರೀಶ ಅವರ ತಂಡವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.