ಸುದ್ದಿ ಕನ್ನಡ ವಾರ್ತೆ

. ಕಾರವಾರ: ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತ ವ್ಯಾಪ್ತಿಯ ಸಾವರಪೈ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಗ್ರಾಮಸ್ಥರ ನಿದ್ದೆ ಕದಡಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ. ಶುಕ್ರವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಿಂದ ಸ್ಥಳೀಯರು ಭಯದಿಂದ ಮುಕ್ತರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ತಾಕುಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚಾರ ಹೆಚ್ಚಾಗಿ, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ವಿಷಯವನ್ನು ತಂದು, ತುರ್ತು ಕ್ರಮಕ್ಕೆ ಮನವಿ ಮಾಡಿದ್ದರು. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ, ವಲಯ ಅರಣ್ಯಾಧಿಕಾರಿ ವಿ.ಪಿ.ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಸಾವರಪೈ ಸಮೀಪ ಮೂರು ದಿನಗಳ ಹಿಂದೆಯೇ ಬೋನು ಅಳವಡಿಸಲಾಗಿತ್ತು. ಪಂಜರವನ್ನು ಗಿಡಮರಗಳ ಕೊಂಬೆಗಳಿಂದ ಮುಚ್ಚಿ ನೈಸರ್ಗಿಕ ವಾತಾವರಣದಂತೆ ರೂಪಿಸಿ ತಾಣೆಯಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಈ ತಂತ್ರ ಯಶಸ್ವಿಯಾಗಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 6:30ರ ವೇಳೆಗೆ ಚಿರತೆ ಬೋನಿನಲ್ಲಿ ಸೆರೆಯಾದ ಮಾಹಿತಿ ಲಭ್ಯವಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಮುಂದಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಸೆರೆಸಿಕ್ಕ ಚಿರತೆಗೆ ಅಂದಾಜು 2ರಿಂದ 3 ವರ್ಷ ವಯಸ್ಸಿರಬಹುದು ಎಂದು ಹೇಳಲಾಗುತ್ತಿದ್ದು, ಅದನ್ನು ಸುರಕ್ಷಿತವಾಗಿ ವನ್ಯಜೀವಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ವಿ ಪಿ ನಾಯ್ಕ,ಡಿ ಆರ್ ಎಫ್ ಒ ಡಿ ಆರ್ ನಾಯ್ಕ ಗಣೇಶ ನಾಯ್ಕ, ರಮೇಶ್, ಕಿರಣಕುಮಾ‌ರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.