ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕದ ತಿರುಪತಿ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ‘ಪರಾಭವ’ ನಾಮ ಸಂವತ್ಸರದಲ್ಲಿನ ಶ್ರೀದೇವರ ಮಹಾರಥೋತ್ಸವವು ಏ.2ರಂದು ನಡೆಯಲಿದೆ.

ತಿರುಮಲ ಯೋಗಿವರ್ಯರಿಂದ ಸ್ಥಾಪಿಸಲ್ಪಟ್ಟ ಈ ಕ್ಷೇತ್ರದಲ್ಲಿ ಪರಂಪರಾಗತ ಆಗಮಶಾಸ್ರೋಕ್ತವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ರಥೋತ್ಸವ ನಡೆಯಲಿದೆ. ಮಾರ್ಚ್ 27 ರಂದು ಪ್ರಾರ್ಥನೆ, ಬೀಜಾವಾಪ, ಉತ್ಸವ ಸಂಕಲ್ಪ, ಮಾತೃಕಾ ಸ್ಥಾಪನೆ, ದೇವನಾಂದಿ, ವರಣ, ಮಧುಪರ್ಕ, ಭೇರಿತಾಡನ, ಯಾಗಶಾಲಾ ಪ್ರವೇಶ, 28ರಂದು ಧ್ವಜಪೂಜಾ, ಧ್ವಜಾರೋಹಣ, ಕ್ಷೇತ್ರಪ್ರಾಕಾರ ಬಲಿ, ರತ್ನ ಮಂಟಪೋತ್ಸವ, 29ರಂದು ಸೂರ್ಯಪ್ರಭಾ ಉತ್ಸವ, ಗಜಯಂತ್ರೋತ್ಸವ, 30ರಂದು ಸಿಂಹ ಯಂತ್ರೋತ್ಸವ, 31ರಂದು ಶೇಷ ಯಂತ್ರೋತ್ಸವ ಜರುಗಲಿದೆ. ಏಪ್ರಿಲ್ 1ರಂದು ದೇವರ ವರ್ಧಂತಿ ಉತ್ಸವ, ಮಹಾದಂಡಬಲಿ, ಗರುಡಯಂತ್ರೋತ್ಸವ ನಡೆಯಲಿದೆ.
ಏಪ್ರಿಲ್ 2ರಂದು ರಥೋತ್ಸವ ಉತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀಮನ್ಮಹಾರಥೋತ್ಸವವು ಏಪ್ರಿಲ್ 2ರ ಗುರುವಾರ ಅದ್ದೂರಿಯಾಗಿ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ರಥಾರೋಹಣ,8 ಗಂಟೆಗೆ ರಥ ಎಳೆಯುವುದು ನಂತರ 9 ಗಂಟೆಯಿಂದ ರಥ ದರ್ಶನ ಪ್ರಾರಂಭವಾಗಲಿದೆ. ಅಂದು ರಾತ್ರಿ 12 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನ ಹಾಗೂ ಹಣ್ಣು-ಕಾಯಿ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಏಪ್ರಿಲ್ 3ರ ಶುಕ್ರವಾರ ಅವಕೃತ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ. ಏಪ್ರಿಲ್ 17ರಂದು ಸಂಪ್ರೋಕ್ಷಣಾ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

ರಥಸ್ಥನಾದ ವೆಂಕಟರಮಣನ ದರ್ಶನ ಪಡೆಯುವುದರಿಂದ ಅಮೋಘ ಫಲ ಪ್ರಾಪ್ತಿಯಾಗಲಿದೆ. ಹರಕೆ ಒಪ್ಪಿಸಲು, ರಥಾರೂಢ ಭಗವಂತನ ದರ್ಶನಕ್ಕೆ ಭಕ್ತರು ಬಂದು ಪುನೀತರಾಗುವರು.
ವೇ.ಮೂ. ಶ್ರೀನಿವಾಸ ಭಟ್ಟ ಮಂಜುಗುಣಿ, ಪ್ರಧಾನ ಅರ್ಚಕರು.