ಸುದ್ದಿ ಕನ್ನಡ ವಾರ್ತೆ
ಹೊನ್ನಾವರ:ತಾಲೂಕಿನ ಬಂಗಾರಮಕ್ಕಿ ಶ್ರೀ ಕ್ಷೇತ್ರಕ್ಕೆ ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನ ಹಿಂದಿನ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ ಅವರು ವಿಶ್ವಕಪ್ ಗೆಲುವಿನ ಬಳಿಕ ಇದೇ ಮೊದಲ ಬಾರಿ ತಮ್ಮ ತವರೂರಾದ ಕುಮಟಾಕ್ಕೆ ಆಗಮಿಸಿದ್ದಾರೆ.
ಮೂಲತಃ ಕುಮಟಾ ತಾಲೂಕಿನ ದಿವಗಿ ಗ್ರಾಮದವರಾದ ರಾಘವೇಂದ್ರ ಅವರ ಆಗಮನವು ತೀವ್ರ ಹರ್ಷ, ಸಂಭ್ರಮವನ್ನುಂಟುಮಾಡಿದ್ದು ಸಾರ್ವಜನಿಕರು ಹೆಮ್ಮೆಯ ಸಾಧಕನಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಸ್ವಗ್ರಾಮಕ್ಕೆ ಆಗಮಿಸಿದ ಬೆನ್ನಲ್ಲೇ ರಾಘವೇಂದ್ರ ಅವರು ಹೊನ್ನಾವರ ಗೇರುಸೊಪ್ಪದಲ್ಲಿರುವ ಪ್ರಸಿದ್ಧ ವೀರಾಂಜನೇಯ ಸಂಸ್ಥಾನ ಬಂಗಾರಮಕ್ಕಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾನದ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ರಾಘವೇಂದ್ರ ಅವರಿಗೆ ಆಶೀರ್ವಚನ ನೀಡಿ, ದೇಶವೇ ಹೆಮ್ಮೆಪಡುವಂತಹ ಅವರ ಕ್ರೀಡಾ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದರು. ಇದೇ ವೇಳೆ ವತಿಯಿಂದ ಸಂಸ್ಥಾನದ ರಾಘವೇಂದ್ರ ದಿವಗಿ ಅವರನ್ನು ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.
