ಸುದ್ದಿ ಕನ್ನಡ ವಾರ್ತೆ

ಶಿರಸಿ: ತಾಲೂಕಿನ ಕಾಗೇರಿ ಹಾಗೂ ನೇಗಾರು ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಕಾಡುಕೋಣಗಳ ಹಾವಳಿ ತೀವ್ರಗೊಂಡಿದ್ದು, ಸುಮಾರು ಎಂಟು ಎಕರೆಗೂ ಹೆಚ್ಚು ಕಬ್ಬು, ಹಸಿಮೇವು, ದ್ವಿದಳ ಧಾನ್ಯಗಳ ಬೇಸಾಯವನ್ನು ಹಾಳು ಮಾಡಿವೆ. ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಭವಿಷ್ಯದ ಬೆಳೆ ಹಾನಿಯಾದ ವರದಿಯಾಗಿದೆ.

15ಕ್ಕೂ ಹೆಚ್ಚು ಕಾಡಕೋಣಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಗಲು-ರಾತ್ರಿ ಎಂಬ ತಾರತಮ್ಯವಿಲ್ಲದೆ ನಡೆಯುತ್ತಿರುವ ಈ ದಾಳಿಯಿಂದ ರೈತರು ಭಯಭೀತರಾಗಿ ತಮ್ಮ ತೋಟದ ಬೆಳೆಗಳಿಗೂ ದಾಂಗುಡಿ ಇಟ್ಟರೆ ಎಂದು ಆತಂಕದಲ್ಲಿ ಇದ್ದಾರೆ.
ಕಾಡಕೋಣಗಳ ದಾಳಿಯಿಂದ ಹಲವು ರೈತರ ಚಿಗುರುತ್ತಿದ್ದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮುಕ್ಕಾಲು ಎಕರೆ ಕಬ್ಬಿನಗದ್ದೆ, ಹಸಿಮೆವು ಹಾಗೂ ಧಾನ್ಯದ ಬೆಳೆಗಳಾದ ಸನ್ನೆಂಪು, ಉದ್ದು, ಬವಡೆ ಸೇರಿದಂತೆ ವಿವಿಧ ದ್ವಿದಳ ಧಾನ್ಯ ಬೆಳೆಗಳು ಹಾನಿಗೊಳಗಾಗಿವೆ. ತಿಂಗಳ ಹಿಂದೆ ಗದ್ದೆಯ ಭೂಮಿ ಹದಗೊಳಿಸಿ ಬಿತ್ತನೆ ಮಾಡಿದ್ದ ಬೆಳೆ ಕೈಗೆ ಬರುವ ಮೊದಲೇ ಕಾಡುಮೃಗಗಳ ಪಾಲಿಗೆ ತುತ್ತಾಗಿವೆ.
ನೇಗಾರಿನ ಮಹೇಶ ಗಜಾನನ ಹೆಗಡೆ, ವಿಶ್ವನಾಥ ಮಹಾಬಲೇಶ್ವರ ಹಾಗೂ ಕೃಷ್ಣ ನಾಗ ಪೂಜಾರಿ, ಕಾಗೇರಿಯ ಪರಮೇಶ್ವರ ಅನಂತ ಹೆಗಡೆ, ನರಸಿಂಹ ವೆಂಕಟರಮಣ ಹೆಗಡೆ ಹಾಗೂ ಶ್ರೀಪಾದ ರಾಮಚಂದ್ರ ಹೆಗಡೆ ಅವರ ಕೃಷಿ ಭೂಮಿಯಲ್ಲೂ ಹಾನಿ ಸಂಭವಿಸಿದೆ.

ಕಾಡುಕೋಣಗಳು ರಾತ್ರಿ ವೇಳೆ ಗುಂಪುಗಳಾಗಿ ಹೊಲಗಳಿಗೆ ನುಗ್ಗುತ್ತಿವೆ. ಕೆಲವಡೆ ರೈತರು ತಟ್ಟೆ ಬಾರಿಸುವುದು, ಪಟಾಕ್ಷಿ ಹೊಡೆಯುವದು ಮುಂತಾದ ವಿಧಾನಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದರೂ ಕ್ಯಾರೆ ಎನ್ನದಂತೆ ಇವೆ. ಹಿಂಡಾಗಿ ಬರುವ ಕಾಡಕೋಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ವರ್ಷಗಳಲ್ಲಿ ಒಂದೆರಡು ಸಂಖ್ಯೆಯಲ್ಲಿ ಮಾತ್ರ ಕಾಣಿಸುತ್ತಿದ್ದ ಕಾಡುಕೋಣಗಳು, ಈ ಬಾರಿ ಗುಂಪುಗಳಾಗಿ ದಾಳಿ ನಡೆಸುತ್ತಿ ರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಕಾಗೇರಿ, ನೇಗಾರಿನಲ್ಲಿ ಮಾಡಿದ ಕಾಡುಕೋಣಗಳ ಹಾವಳಿ ಈಗ ಬರೂರು, ಬೆಟ್ಟಕೊಪ್ಪ, ಕುಳವೆ, ಕಾನಮೂಲೆ, ಬೆಳಖಂಡ, ಸೊಪಿನಮನೆ, ಕಾನಗೋಡ ಹಾಗೂ ಯಡಹಳ್ಳಿ ಭಾಗಗಳ ರೈತರಿಗೂ ಆತಂಕ ಉಂಟು ಮಾಡುವಂತೆ ಆಗಿದೆ. ಕಾಡಕೋಣಗಳ ದಾಳಿಯಿಂದ ಹೈರಾಣಾಗಿರುವ ರೈತರು ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.