ಸುದ್ದಿ ಕನ್ನಡ ವಾರ್ತೆ
ಕಾರವಾರ:ತಾಲೂಕಿನ ರಾಷ್ಟೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆಯ ವೇಳೆ ಪರ್ಮಿಟ್ ಅವಧಿ
ಮುಗಿದಿದ್ದರೂ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 35.5 ಲಕ್ಷ ರೂಪಾಯಿ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಕಾರವಾರದ ಮಾಜಾಳಿ ಚೆಕ್‌ ಪೋಸ್ಟ್ ಬಳಿ ವಶಕ್ಕೆ ಪಡೆದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಮಂಗಳೂರು ವಿಭಾಗದ ಜಾರಿ ಮತ್ತು ತನಿಖಾ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಾಜಾಳಿ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ, ಮಾರ್ಚ್ 13ರ ಶುಕ್ರವಾರ ರಾತ್ರಿ 11:55ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕರ್ನಾಟಕದಿಂದ ಗೋವಾ ಕಡೆಗೆ ಹೊರಟಿದ್ದ ‘ಏಂ-06-6025’ ನೋಂದಣಿ ಸಂಖ್ಯೆಯ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ವಾಹನದಲ್ಲಿದ್ದ ಇಂಪೋರ್ಟ್ ಹಾಗೂ ಎಕ್ಸ್‌ಪೋರ್ಟ್ ರಹದಾರಿ (ಪರ್ಮಿಟ್) ಪತ್ರವನ್ನು ಪರಿಶೀಲಿಸಿದಾಗ, ಅದರ ಅಧಿಕೃತ ಅವಧಿಯು ಮಾರ್ಚ್ 10, 2026ರಂದೇ ಮುಕ್ತಾಯಗೊಂಡಿರುವುದು ಕಂಡುಬಂದಿದೆ. ರಹದಾರಿ ಪತ್ರದ ಅವಧಿ ಮುಗಿದಿದ್ದರೂ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು, ವಾಹನದಲ್ಲಿದ್ದ ಒಟ್ಟು 1200 ರಟ್ಟಿನ ಪೆಟ್ಟಿಗೆಗಳ ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಅಂದಾಜು ಮೌಲ್ಯ 35.5 ಲಕ್ಷ ರೂಪಾಯಿಗಳಾಗಿವೆ.
ಸ್ಥಳದಲ್ಲಿಯೇ ಪಂಚನಾಮೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅಧಿಕಾರಿಗಳು, ವಶಪಡಿಸಿಕೊಂಡ ಮದ್ಯ ಹಾಗೂ ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಿಗೆ ಹಸ್ತಾಂತರಿಸಿದ್ದಾರೆ.