ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಿನಾದ್ಯಂತ ರವಿವಾರ ಸಂಜೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ
ಗುಡುಗು, ಸಿಡಿಲು ಸಹಿತ ಭಾರೀ ಬಿರುಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ಕೆಲ ಕಾಲ ಭಯಾನಕ ವಾತಾವರಣ ನಿರ್ಮಾಣವಾಗಿ ಜನಜೀವನ ಅಸ್ತವ್ಯಸ್ತಗೊಳಿಸಿತು.
ಬಿಸಿಲಿನ ಧಗೆಯಿಂದ ಬೆಂದು ಹೋಗಿದ್ದ ಜನರಿಗೆ ಈ ಮಳೆಯು ತಂಪೆರೆದು
ಸಮಾಧಾನ ನೀಡಿರುವುದು,ಒಂದು ಕಡೆಯಾದರೆ ಭಾರೀ ಬಿರುಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ತಾಲೂಕಿನ ಪಾಳಾ-ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ಮಾವಿನ ಮರ ಉರುಳಿ ರಸ್ತೆ ಮೇಲೆ ಬಿದ್ದು ಸುಮಾರು 2 ಘಂಟೆಗಳ ಕಾಲ ವಾಹನ ಸಂಚಾರ ರಸ್ತೆಯ ಎರಡು ಬದಿ ಸ್ಥಗಿತಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿದರು. ಇನ್ನು ಕೆಲವೆಡೆ ಗಿಡಮರಗಳು ಉರುಳಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಗಾಳಿ ಮಳೆಯ ರಬಸಕ್ಕೆ ಪಟ್ಟಣದ ಕೆಲ ಬಡಾವಣೆಗಳಲ್ಲಿ ಮನೆಗಳ ಮೇಲ್ಟಾವಣಿಗಳು ಹಾರಿ ಹೋಗಿದ್ದು, ಗೃಹ ಬಳಕೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದ ದೃಶ್ಯಗಳು ಅಲ್ಲಲ್ಲಿ ಕಂಡು ಬಂತು ಇದರಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು.
