ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಗ್ರಾಮದಲ್ಲಿ ಗುಂದ-11 ತಂಡದವರು ಆಯೋಜಿಸಿದ್ದ ಮೂರು ದಿನಗಳ ಟೆನ್ನಿಸ್ ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಗುಂದ-11 ತಂಡದ ಪದಾಧಿಕಾರಿಗಳು ಮೂರು ದಿನಗಳ ಕಾಲ ಉತ್ತಮ ಊಟದ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ಮಾಡಿದ್ದರು.ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾ ತಂಡ ಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಿ ಕ್ರೀಡಾಕೂಟವನ್ನು ಯಶಸ್ವಿಯಾಗಲು ಸಹಕರಿಸಿದರು. ರವಿವಾರ ನಡೆದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ನಂದಿಗದ್ದೆಯ ತಂಡವು ಚಾಪೇರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿದರೆ,ಚಾಪೇರ ತಂಡವು ದ್ವಿತೀಯ ಸ್ಥಾನ ರನ್ನರ್ ಅಪ್ ಸ್ಥಾನ ಪಡೆಯಿತು. ಅತಿಥೇಯ ಗುಂದ -11 ತಂಡವು ತೃತೀಯ ಸ್ಥಾನ ಪಡೆಯುವ ಮೂಲಕ ಊರಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಬಹುಮಾನ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಊರಿನ ಮಿರಾಶಿ ಲಕ್ಷ್ಮಣ ಬರ್ಸೇಕರ ಮಾತನಾಡಿ ಕ್ರೀಡಾಕೂಟವನ್ನು ಎಲ್ಲರ ಸಹಕಾರದಿಂದ ಉತ್ತಮವಾಗಿ ಸಂಘಟಿಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಳಿಸಿದ್ದೀರಿ,ಮುಂದಿನ ದಿನಗಳಲ್ಲಿ ನಮ್ಮ ಊರಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಇದೇ ರೀತಿಯ ಸಂಘಟನೆಯನ್ನು ಒಗ್ಗಟ್ಟಾಗಿ ಕಾಯ್ದುಕೊಂಡು ನಮ್ಮ ಗ್ರಾಮದ ಏಳಿಗೆಗೆ ಕೈ ಜೋಡಿಸೋಣ ಎಂದು ಹೇಳಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರಾದ ಸಂದೇಶ ದೇಸಾಯಿ, ನಂದಿಗದ್ದಾ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾದ ಸುದರ್ಶನ ಭಾಗ್ವತ,ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಭಾಗ್ವತ,ದಯಾನಂದ ಉಪಾಧ್ಯ,ಶ್ರೀಕೃಷ್ಣ ಎಲ್ಲೇಕರ,ಚಾಪೇರ ತಂಡದ ನಾಯಕ ಮಹೇಶ ಮಿರಾಶಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದರ ಬಗ್ಗೆ ಸಂಘಟಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಜೊತೆಗೆ ಬಹುಮಾನ ವಿಜೇತ ತಂಡಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಕೊನೆಯಲ್ಲಿ ಸಭಾದ್ಯಕ್ಷತೆಯನ್ನು ವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಮಾಜಿ ಅಧ್ಯಕ್ಷರಾದ ಅರುಣ ದೇಸಾಯಿ ಮಾತನಾಡಿ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಕ್ಕೆ ಶುಭವನ್ನು ಕೋರಿ,ಭಾಗವಹಿಸಿದ ಎಲ್ಲಾ ತಂಡಗಳಿಗೂ ಅಭಿನಂದನೆಗಳನ್ನು ಸಲ್ಲಿಸಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ ಸಂಘಟಕರ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಊರಿನ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆ, ವಂದನಾರ್ಪಣೆಯನ್ನು ಕ್ರೀಡಾ ತಂಡದ ರಮಾನಂದ ಕುಟ್ಟಿಕರ ನಿರ್ವಹಿಸಿದರು. ರವೀಂದ್ರ ಸಾವರಕರ, ದಿನೇಶ ಕುಟ್ಟಿಕರ, ಗುಂದ-11 ಕ್ರೀಡಾ ಸಂಘದ ಎಲ್ಲಾ ಸದಸ್ಯರು,ಗ್ರಾಮಸ್ಥರು ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡಿದರು.
