ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಕದ್ರಾ ನಿವಾಸಿ
ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿರಾಗ್ ಕೊಠಾರಕರ್ಗೆ ಧಾರವಾಡ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜನವರಿ 9ರಂದು ಕದ್ರಾದ ಕೆಪಿಸಿ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಯುವತಿ ರಿಶೆಲ್ ಕ್ರಿಸ್ತೋದ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಮಗಳ ಆತ್ಮಹತ್ಯೆಗೆ ಚಿರಾಗ್ ಕೊಠಾರಕರ್ ಕಿರುಕುಳವೇ ಕಾರಣ ಎಂದು ಆರೋಪಿಸಿ ರಿಶೆಲ್ ಅವರ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಚಿರಾಗ್ ತಲೆಮರೆಸಿಕೊಂಡಿದ್ದ. ಬಳಿಕ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಕಾರವಾರದಲ್ಲಿ ಮೃತ ರಿಶೆಲ್ ಪರವಾಗಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿತ್ತು.
ತೀವ್ರ ಒತ್ತಡಗಳ ನಡುವೆಯೇ ಜನವರಿ 30ರಂದು ಚೆನ್ನೈನಲ್ಲಿರುವ ತನ್ನ ಸಂಬಂಧಿ ಮನೆಯಲ್ಲಿತಲೆಮರೆಸಿಕೊಂಡಿದ್ದ ಚಿರಾಗ್ ಕೊಠಾರಕರ್ ಅನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆ ಬಳಿಕ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಚಿರಾಗ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ಕೊಠಾರಕರ್ ಕುಟುಂಬ ಧಾರವಾಡ ಹೈಕೋರ್ಟ್ಗೆ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರು ಜಾಮೀನು ಭದ್ರತೆಗಳೊಂದಿಗೆ ಹಲವು ಷರತ್ತುಗಳನ್ನು ವಿಧಿಸಿ ಆರೋಪಿ ಚಿರಾಗ್ ಕೊಠಾರಕರ್ಗೆ ಜಾಮೀನು ಮಂಜೂರು ಮಾಡಿದೆ.
