ಸುದ್ದಿ ಕನ್ನಡ ವಾರ್ತೆ

ಅಂಕೋಲಾ : ತಾಲೂಕಿನ ಅಗಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಸುಕಿನ 3 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು 18 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಬೆಳಗಾವಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಅಗಸೂರು ಬಳಿ ಇರುವ ಜಗದೀಶ ಡಾಬಾ ಎದುರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ.

ಅಪಘಾತದ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ನಿದ್ರೆಯಲ್ಲಿದ್ದು ಬಸ್ ಕುಸಿದು ಬಿದ್ದ ಶಬ್ದಕ್ಕೆ ಬೆಚ್ಚಿಬಿದ್ದಿದ್ದು, ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ಅಂಕೋಲಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಾಗೇ ಬಸ್ ಮೇಲಕ್ಕೆತ್ತುವ ಸಂಧೃಭದಲ್ಲಿ ಬಸ್ನಲ್ಲಿ ಸಿಲುಕಿಕೊಂಡಿದ್ದ ಓರ್ವ ಮೃತದೇಹ ಹೊರತೆಗೆಯಲಾಯಿತು. ಅದೇ ರೀತಿ ಗಾಯಾಳುಗಳನ್ನು ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಸ್ ಬಿದ್ದಿರುವ ಸ್ಥಿತಿ ನೋಡಿದರೆ ಪ್ರಯಾಣಿಕರ ಪ್ರಾಣಾಪಾಯ ತಪ್ಪಿದ್ದು ಅದೃಷ್ಟ ಎಂದೇ ಹೇಳಬೇಕಾಗಿದೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.