ಸುದ್ದಿ ಕನ್ನಡ ವಾರ್ತೆ

ದಾಂಡೇಲಿ: ತಾಲೂಕಿನ ವ್ಯಾಪ್ತಿಯ ಕುಳಗಿ-ಭಾಗವತಿ ರಸ್ತೆಯಲ್ಲಿ ಒಂಟಿ ಸಲಗವೊಂದು ನಡುರಸ್ತೆಯಲ್ಲಿ ಓಡಾಟ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಭಾಗವತಿಯಿಂದ ಕುಳಗಿ ಬರುತ್ತಿದ್ದ ವಾಹನದ ಪ್ರಯಾಣಿಕರೊಬ್ಬರು ಆನೆ ನಡುರಸ್ತೆಯಲ್ಲಿ ಸಾಗುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಸುಮಾರು ದಿನಗಳ ವಿರಾಮದ ನಂತರ ಮತ್ತೇ ಒಂಟಿ ಸಲಗ ನಡು ರಸ್ತೆಯಲ್ಲಿ ಕಾಣಿಸಿಕೊಂಡಿದೆ.

ಈ ರಸ್ತೆಯಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳು ಆಗೊಮ್ಮೆ ಈಗೊಮ್ಮೆ ದರ್ಶನ ನೀಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬಹಳಷ್ಟು ಎಚ್ಚರಿಕೆಯನ್ನು ವಹಿಸಿ ಮುಂದೆ ಸಾಗಬೇಕಾಗಿದೆ ಎಂದು ಅರಣ್ಯ ಇಲಾಖೆಯವರು ಮನವಿ ಮಾಡಿರುತ್ತಾರೆ.