ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಮತ್ತು ಕರಾವಳಿ ಭಾಗವನ್ನು ಬೆಸೆಯುವ ಪ್ರಮುಖ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 52ರ (NH-52) ವ್ಯಾಪ್ತಿಯಲ್ಲಿ ಬರುವ ಹೊಸಹಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ವರೆಗಿನ ರಸ್ತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ₹101.21 ಕೋಟಿಗಳ ಬೃಹತ್ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಸುಮಾರು 44.74 ಕಿಮೀ ಉದ್ದದ ರಸ್ತೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ರಸ್ತೆಯ ಬಲವರ್ಧನೆ ಮತ್ತು ಅಗತ್ಯವಿರುವ ಕಡೆಗಳಲ್ಲಿ ಸಂಪೂರ್ಣ ಪುನರ್ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೆರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

​ಜಿಲ್ಲೆಯ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ಈ ಯೋಜನೆಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ಈ ಯೋಜನೆಯಲ್ಲಿ ಕೇವಲ ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ, ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಕಿಮೀ 393.903 ರಲ್ಲಿ ಕಂಚನಬೈಲು ವಿನಲ್ಲಿ ಹಳೆಯದಾದ ಸಣ್ಣ ಸೇತುವೆಯನ್ನು ತೆರವುಗೊಳಿಸಿ 12 ಮೀಟರ್ ಅಗಲದ ಹೊಸ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಜೊತೆಗೆ ಕಿಮೀ 384.628 ರಲ್ಲಿರುವ ಪ್ರಮುಖ ಹೊನ್ನಳ್ಳಿಯ ಸೇತುವೆಯನ್ನು ಆಧುನಿಕ ಪದ್ಧತಿಯಲ್ಲಿ ದುರಸ್ತಿಗೊಳಿಸಲಾಗುವುದು. ಮಳೆಯಿಂದ ರಸ್ತೆ ಹಾನಿಯಾಗದಂತೆ ತಡೆಯಲು 5.7 ಕಿಮೀ ಉದ್ದದ ಸುಸಜ್ಜಿತ ಆರ್‌ಸಿಸಿ ಚರಂಡಿ ವ್ಯವಸ್ಥೆ ಮತ್ತು 4 ಪ್ರಮುಖ ಜಂಕ್ಷನ್‌ಗಳ ಸುಧಾರಣೆಗೆ ಒತ್ತು ನೀಡಲಾಗಿದೆ.

​ಈ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಅಂದರೆ ಮುಂದಿನ 11 ತಿಂಗಳ ಒಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದ್ದು, ಕಾಮಗಾರಿ ಮುಗಿದ ನಂತರವೂ ಐದು ವರ್ಷಗಳ ಕಾಲ ಗುತ್ತಿಗೆದಾರರೇ ರಸ್ತೆಯ ನಿರ್ವಹಣೆಯನ್ನು ನೋಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಲಿರುವ ಈ ಯೋಜನೆಯು ಮುಂದಿನ ದಿನಗಳಲ್ಲಿ ಉತ್ತರ ಕನ್ನಡದ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾವೇರಿ ಮಾಹಿತಿ ನೀಡಿದ್ದಾರೆ.