ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಹೈಚರ್ಚ್ ರಸ್ತೆಯ ಮಹಿಳೆಯೊರ್ವರಿಗೆ ಆನ್ಲೈನ್ ಪಾರ್ಟ್
ಟೈಮ್ ಕೆಲಸದ ಹೆಸರಿನಲ್ಲಿ ಸೈಬರ್ ವಂಚಕರು ಬರೋಬ್ಬರಿ 7 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ಲಾಭದ ಆಸೆಗೆ ಬಿದ್ದ ಮಹಿಳೆಯಾದ ವರ್ಷಾ ರೇವಣಕರ(52) ಅವರು 7 ಲಕ್ಷಗಳಷ್ಟು ತಮ್ಮ ಹಣವನ್ನು ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಫೆಬ್ರವರಿ 24ರಂದು ವರ್ಷಾ ಅವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಪ್ ಸಂದೇಶವೊಂದು ಬಂದಿತ್ತು. ಅದರಲ್ಲಿ ಆನ್ಲೈನ್ ಪಾರ್ಟ್ ಟೈಮ್ ಜಾಬ್ ಇರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆ ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಒಂದು ವೆಬ್ಸೈಟ್ ಓಪನ್ ಆಗಿದ್ದು,
ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುವ ಕೆಲಸ ಮಾಡಬೇಕೆಂದು ತಿಳಿಸಲಾಗಿತ್ತು. ಇದಕ್ಕೆ ಒಪ್ಪಿಕೊಂಡ ವರ್ಷಾ ಅವರನ್ನು VIP ELITE MEMBERSHIP GROUP ಎಂಬ ವಾಟ್ಸಪ್ ಗ್ರೂಪ್ ಗೆ ಸೇರಿಸಲಾಯಿತು.
ಗ್ರೂಪ್ ಅಡ್ಮಿನ್ ಆಗಿದ್ದ ಅನನ್ಯ ಎಂಬಾಕೆ ವಾಟ್ಸಪ್ ಕರೆ ಮಾಡಿ ವರ್ಷಾ ಅವರಿಗೆ ಕೆಲಸದ ವಿವರ ವಿವರಿಸಿದ್ದಳು. ನೀವು ನಾವು ನೀಡುವ ಟಾಸ್ಕ್ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಆಮಿಷ ಒಡ್ಡಿದ್ದಳು. ಆರಂಭದಲ್ಲಿ ನಂಬಿಕೆ ಬರಲೆಂದು ವರ್ಷಾ ಅವರಿಂದ 200 ರೂ. ಹೂಡಿಕೆ ಮಾಡಿಸಿ, ಅವರ ಬ್ಯಾಂಕ್ ಖಾತೆಗೆ 300 ರೂ.ಗಳನ್ನು ಮರಳಿ ಜಮೆ ಮಾಡಲಾಗಿತ್ತು. ಕೇವಲ ಒಂದು ಟಾಸ್ಕನಿಂದ 100 ರೂ. ಲಾಭ ಸಿಕ್ಕಿದ್ದನ್ನು ನೋಡಿ ವರ್ಷಾ ಅವರು ವಂಚಕರ ಮಾತನ್ನು ಪೂರ್ತಿಯಾಗಿ ನಂಬಿದರು.
ನಂತರ ಹಂತ ಹಂತವಾಗಿ
ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಸಿಗಲಿದೆ ಎಂದು ವಂಚಕರು ನಂಬಿಸಿದರು. ಇದನ್ನು ಸತ್ಯವೆಂದು ಭಾವಿಸಿದ ವರ್ಷಾ ಅವರು ಫೆಬ್ರವರಿ 27 ರಿಂದ ಮಾರ್ಚ್ 2ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 7.02.000 ವರ್ಗಾಯಿಸಿದರು. ಆದರೆ, ಇಷ್ಟು ದೊಡ್ಡ ಮೊತ್ತ ಜಮೆಯಾದ ನಂತರ ವಂಚಕರು ಲಾಭದ ಹಣವನ್ನೂ ನೀಡದೆ,ಅಸಲು ಹಣವನ್ನೂ ಹಿಂದಿರುಗಿಸದೆ ಕೈಕೊಟ್ಟಿದ್ದಾರೆ.
ಮೋಸ ಹೋಗಿರುವುದು ತಿಳಿಯುತ್ತಿದ್ದಂತೆಯೇ ವರ್ಷಾ ಅವರು ಕಾರವಾರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
