ಸುದ್ದಿ ಕನ್ನಡ ವಾರ್ತೆ
​ರಾಜ್ಯ ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನ ದಿಂದ ಮಾವು ಬೆಳೆಗಾರರ ಖಾತೆಗೆ 1.22 ಕೋಟಿ ರೂ. ವಿಮೆ ಜಮೆ ಆಗಿದೆ
​ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ರೈತರ ಪಾಲಿಗೆ ಮರೀಚಿಕೆಯಾಗಿದ್ದ 2024-25ರ ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆಯು, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಪ್ರಯತ್ನದಿಂದಾಗಿ ಮಾವು ಬೆಳೆಗಾರರ ಖಾತೆಗಳಿಗೆ ಜಮೆಯಾಗುತ್ತಿದೆ. ಸರ್ಕಾರದ ವಿಳಂಬ ನೀತಿಯಿಂದಾಗಿ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ನ್ಯಾಯ ಕೊಡಿಸಲು ಸಂಸದರು ವಿಮಾ ಕಂಪನಿಗಳ ಮೇಲೆ ನಿರಂತರ ಒತ್ತಡ ಹೇರಿ ಈ ಪರಿಹಾರ ಮೊತ್ತ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಹಳಿಯಾಳ ಮತ್ತು ದಾಂಡೇಲಿ ಭಾಗದ ಒಟ್ಟು 237.26 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದ 357 ರೈತರ ಖಾತೆಗಳಿಗೆ ಒಟ್ಟು 1 ಕೋಟಿ 22 ಲಕ್ಷ ರೂಪಾಯಿಗಳ ವಿಮಾ ಮೊತ್ತವು ವಿಮಾ ಕಂಪನಿಯಿಂದ ನೇರವಾಗಿ ಜಮೆಯಾಗುತ್ತಿದೆ. ಸರ್ಕಾರದ ಉದಾಸೀನತೆಯಿಂದಾಗಿ ವಿಮೆ ಕೈತಪ್ಪಿ ಹೋಗುವ ಭೀತಿಯಲ್ಲಿದ್ದ ಕೃಷಿಕರಿಗೆ ಸಂಸದರ ಈ ಸತತ ಪ್ರಯತ್ನವು ದೊಡ್ಡ ಆಸರೆಯಾಗಿದೆ. ರೈತರ ಹಿತರಕ್ಷಣೆಗಾಗಿ ಶ್ರಮಿಸಿದ ಸಂಸದರಿಗೆ ಈ ಭಾಗದ ಮಾವು ಬೆಳೆಗಾರರು ಅಭಿನಂದನೆ ಸಲ್ಲಿಸಿದ್ದಾರೆ.