ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಅವುರ್ಲಿ ಗ್ರಾಮದಲ್ಲಿ ಬಣ್ಣಗಳ ಜೊತೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಗ್ರಾಮದಲ್ಲಿ ವಿಶೇಷವಾಗಿ ಹುಡುಗರು ಪರಸ್ಪರ ಪರಿಸರ ಸ್ನೇಹಿ ಗುಲಾಲ್ ಬಣ್ಣಗಳನ್ನು ಎರಚಿಕೊಂಡು ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಸೋಮವಾರ ರಾತ್ರಿ ಹೋಲಿಕಾ ದಹನ ಕಾರ್ಯಕ್ರಮ ನೆರವೇರಿದ್ದು, ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ಹೋಳಿ ಹಬ್ಬದ ಆಚರಣೆಯನ್ನು ಮಾಡದೇ ಬುಧವಾರ ಬೆಳಗಿನ ಜಾವ ಯುವಕರು ಉತ್ಸಾಹದಿಂದ ಹೋಳಿ ಆಚರಣೆಯಲ್ಲಿ ಭಾಗವಹಿಸಿದರು. ಜಾತಿ-ಮತ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಹಬ್ಬವನ್ನು ಆಚರಿಸಿ ಸಹೋದರತ್ವದ ಸಂದೇಶ ಸಾರಿದರು.

ಹೋಳಿ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಪುರಾತನ ಹಿಂದೂ ಹಬ್ಬವಾಗಿದ್ದು, ಪ್ರಹ್ಲಾದ-ಹೋಲಿಕಾ ಪೌರಾಣಿಕ ಕಥೆಯನ್ನು ಆಧಾರವಾಗಿಸಿಕೊಂಡಿದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವು ವಸಂತ ಋತುವಿನ ಆಗಮನದ ಸಂಕೇತವಾಗಿಯೂ ಪರಿಗಣಿಸಲಾಗಿದೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಮಕ್ಕಳು,ಯುವಕರು,ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.