ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಹಾಗೂ ಐತಿಹಾಸಿಕ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಬುಧವಾರ ಅತ್ಯಂತ ಭಕ್ತಿಭಾವ ಹಾಗೂ ಸಡಗರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದ ಮುಕ್ತಾಯದ ದಿನ ಬಿಡಕಿಬೈಲಿನಲ್ಲಿರುವ ಜಾತ್ರಾ ಗದ್ದುಗೆಯಿಂದ ಇಳಿದು ಮಾರಿಕಾಂಬೆ ದೇವಿಯು ಹೊರಟ ದೃಶ್ಯ ಉಪಸ್ಥಿತರಿದ್ದ ಭಕ್ತರಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಫೆಬ್ರವರಿ 24 ರಿಂದ ಆರಂಭವಾಗಿದ್ದ ಒಂಬತ್ತು ದಿನಗಳ ಈ ಭವ್ಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಕ್ಕೆ ಬುಧವಾರ ತೆರೆಬಿದ್ದಿದೆ.ಜಾತ್ರೆಯ ಕೊನೆಯ ದಿನ ಬೆಳಿಗ್ಗೆಯಿಂದಲೇ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದ ದೇವಿಗೆ ವಿಶೇಷ ಪೂಜೆ ಹಾಗೂ ಸೇವಾ ಕಾರ್ಯಗಳು ನಡೆದವು.

ಬೆಳಿಗ್ಗೆ 10:47ರ ವರೆಗೆ ಭಕ್ತರಿಗೆ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗಿತ್ತು, ಆ ನಂತರ ಎಲ್ಲಾ ಸಾರ್ವಜನಿಕ ಸೇವಾ ಕಾರ್ಯಗಳನ್ನು ಸ್ಥಗಿತಗೊಳಿಸಿ ವಿಸರ್ಜನಾ ವಿಧಿವಿಧಾನಗಳನ್ನು ಆರಂಭಿಸಲಾಯಿತು.ದೇವಸ್ಥಾನದ ಸಂಪ್ರದಾಯ ದಂತೆ ಎಲ್ಲಾ ಧಾರ್ಮಿಕ ವಿಧಿಗಳನ್ನು ಪೂರೈಸಿದ ನಂತರ, ಮಧ್ಯಾಹ್ನ ಸರಿಯಾಗಿ 1:13 ಗಂಟೆಗೆ ಲಕ್ಷಾಂತರ ಭಕ್ತರ ‘ಜಯಘೋಷ’ಗಳ ನಡುವೆ ದೇವಿಯ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಶ್ರೀ ದೇವಿಯು ಗದ್ದುಗೆಯಿಂದ ಇಳಿದು ಬರುವ ಸಂದರ್ಭದಲ್ಲಿ ಸಂಪ್ರದಾಯದಂತೆ ‘ಮಾತಂಗಿ ಚಪ್ಪರ’ಕ್ಕೆ ಬೆಂಕಿ ಹಚ್ಚುವ ವಿಶಿಷ್ಟ ಆಚರಣೆ ನಡೆಯಿತು. ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ತಾಯಿ ಮಾರಿಕಾಂಬೆಯು ಮೆರವಣಿಗೆಯ ಮೂಲಕ ತನ್ನ ತವರು ಮನೆಯತ್ತ ಪ್ರಯಾಣ ಬೆಳೆಸಿದರು.

ಒಂಬತ್ತು ದಿನಗಳ ಕಾಲ ನಡೆದ ರಥಾರೋಹಣ, ಗದ್ದುಗೆ ಪ್ರತಿಷ್ಠಾಪನೆ ಹಾಗೂ ಕಲ್ಯಾಣೋತ್ಸವಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಈ ಐತಿಹಾಸಿಕ ಕ್ಷಣಕ್ಕೆ ಶಾಸಕ ಭೀಮಣ್ಣ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗಣ್ಯರು ಹಾಗೂ ಸಾಗರದೋಪಾದಿಯಲ್ಲಿ ಹರಿದು ಬಂದಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು. ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ತ್ ನಡುವೆ ಜಾತ್ರಾ ಮಹೋತ್ಸವವು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠಾಪನೆ ನೆರವೇರಿಸಲ್ಪಡುತ್ತಿದ್ದು, ಅಂದಿನಿಂದ ದೇವಸ್ಥಾನದಲ್ಲಿ ನಿತ್ಯ ಪೂಜೆ, ದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಪುನಃ ಆರಂಭಗೊಳ್ಳುತ್ತವೆ.